



ಮಂಗಳೂರು: ಹಂಪನಕಟ್ಟೆಯ ಚಿನ್ನದ ಅಂಗಡಿಯೊಂದರಲ್ಲಿನ ಕೆಲಸಗಾರ ಮುಸ್ತಾಫ ಎಂಬವವರನ್ನು ಅಪಹರಿಸಿ ಚಿನ್ನದ ಗಟ್ಟಿ ದರೋಡೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಕೋಟೆಕಾರು ಕೆ.ಸಿ.ರೋಡ್ ನಿವಾಸಿ ಫಾರಿಶ್(18), ಉಳ್ಳಾಲದ ಮುಕ್ಕಚೇರಿ ನಿವಾಸಿ ಸಫ್ವಾನ್(23), ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಅರಾಫತ್ ಆಲಿ(18), ಉಳ್ಳಾಲದ ದರ್ಗಾದ ಹತ್ತಿರ ನಿವಾಸಿ ಫರಾಝ್(19) ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆ.26 ರಾತ್ರಿ 8-45 ವೇಳೆಗೆ ಚಾಯ್ಸ್ ಗೋಲ್ಡ್ ಎಂಬ ಹೆಸರಿನ ಚಿನ್ನಾಭರಣದ ಅಂಗಡಿಯ ಕೆಲಸಗಾರ ಮುಸ್ತಾಫ ಎಂಬವರು ಸ್ಕೂಟರ್ ನಂಬ್ರ KA-19EZ-2079 ನೇದರ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದರು ಈ ವೇಳೆ ಮಂಗಳೂರು ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಸ್ಕೂಟರೊಂದರಲ್ಲಿ ಬಂದು ತಡೆದು ನಿಲ್ಲಿಸಿದ್ದಾರೆ. ಇದೇ ವೇಳೆಗೆ ಉಳಿದ ಆರೋಪಿಗಳು ಕಾರೊಂದರಲ್ಲಿ ಬಂದು ಮುಸ್ತಾಫ ರವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿ ಮಂಗಳೂರು ಎಕ್ಕೂರು ಎಂಬಲ್ಲಿ ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 111/2025 ಕಲಂ 137(2), 310(2) BNS -2023 ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಮಂಗಳೂರು ಹಂಪನಕಟ್ಟೆಯಲ್ಲಿರುವ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದವನು. ಇದೇ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಫಾರಿಶ್ ಎಂಬಾತನಿಗೆ ಚಿನ್ನದ ಗಟ್ಟಿಯನ್ನು ಕೊಂಡು ಹೋಗುವ ಮಾಹಿತಿ ನೀಡುವಂತೆ ತಿಳಿಸಿದ್ದ. ಈ ಹಿನ್ನೆಲೆ ಸೆ.26 ರಾತ್ರಿ 8-45ಕ್ಕೆ ಮುಸ್ತಾಫ ರವರು ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುವ ಸಂಧರ್ಭದಲ್ಲಿ ಅವರ ಚಲನವಲನದ ಮಾಹಿತಿಯನ್ನು ಆರೋಪಿ ಫಾರಿಶ್ ನಿಗೆ ನೀಡಿದ್ದು ಅದರಂತೆ ಈ ಆರೋಪಿಗಳು ಇತರ ಆರೋಪಿಗಳೊಂದಿಗೆ ಸೇರಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಲು ಪೂರ್ವಯೋಜಿತ ಸಂಚು ರೂಪಿಸಿದ್ದರು.
ಆರೋಪಿ ಸಫ್ವಾನ್ ಕೃತ್ಯಕ್ಕೆ ಕಾರನ್ನು ಒದಗಿಸಿದ್ದು, ಮುಸ್ತಾಫರವರು ತನ್ನ ಸ್ಕೂಟರಿನ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ರವರು ಸುಜುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿದ್ದರು. ಇದೇ ವೇಳೆ ಉಳಿದ ಆರೋಪಿಗಳು ಸಫ್ವಾನ್ ಒದಗಿಸಿದ ಬಿಳಿ ಬಣ್ಣದ ಕಾರೊಂದರಲ್ಲಿ ಬಂದು ಮುಸ್ತಾಫರವರನ್ನು ಕಾರಿನಲ್ಲಿ ಹಾಕಿ ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ಮಂಗಳೂರು ಎಕ್ಕೂರು ಎಂಬಲ್ಲಿ ಅವರನ್ನು ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ.
ಈ ಪ್ರಕರಣದಲ್ಲಿ ಕೃತ್ಯಕ್ಕೆ ಉಪಯೋಗಿಸಿದ KA-19HT-8545 ನೋಂದಣಿ ಸಂಖ್ಯೆಯ ಸುಜುಕಿ ಆಕ್ಸೆಸ್ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದು ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲು ಬಾಕಿ ಇರುತ್ತದೆ.
ಈ ಪ್ರಕರಣದ ಆರೋಪಿಗಳನ್ನು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮಂಗಳೂರು ನಗರ ಮತ್ತು ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ, ಸಹಾಯಕ ಪೊಲೀಸ್ ಆಯುಕ್ತರು, ಸಿಸಿಬಿ ಘಟಕ ಮಂಗಳೂರು ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು ಹಾಗೂ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರ ಜಂಟಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ.








