Monday, August 10, 2026
spot_imgspot_img
spot_imgspot_img

ರಾಂಚಿಯಲ್ಲಿ JPSC-JSSC ಅಕ್ರಮದ ವಿರುದ್ಧ ಪ್ರತಿಭಟನೆ – ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್

- Advertisement -
- Advertisement -

ರಾಂಚಿ: ಜಾರ್ಖಂಡ್‌ನ ರಾಂಚಿಯಲ್ಲಿ ಇಂದು JPSC ಮತ್ತು JSSC ಪರೀಕ್ಷಾರ್ಥಿಗಳು ನಡೆಸಿದ ವಿಧಾನಸಭೆ ಮುತ್ತಿಗೆ ಚಳವಳಿ ಉಗ್ರ ರೂಪ ಪಡೆದುಕೊಂಡಿದ್ದು, ಜಾರ್ಖಂಡ್ ವಿಧಾನಸೌಧದ ಕಡೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಲಾಠಿಚಾರ್ಜ್ ಹಾಗೂ ಜಲಫಿರಂಗಿ ಬಳಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ತಕ್ಷಣವೇ ಪಾರದರ್ಶಕ ಸುಧಾರಣೆಗಳನ್ನು ತರಬೇಕು ಮತ್ತು ಈ ಪ್ರಕರಣವನ್ನು ಸಿಬಿಐ ತನಿಖೆ ಕೊಡಬೇಕೆಂದು ಆಗ್ರಹಿಸಿ ಸಾವಿರಾರು ಅಭ್ಯರ್ಥಿಗಳು ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು.

ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರತ್ತ ಚಪ್ಪಲಿ ಹಾಗೂ ಖಾಲಿ ನೀರಿನ ಬಾಟಲಿಗಳನ್ನು ತೂರಿದ್ದಾರೆ.

ಪೊಲೀಸರು ವಾಟರ್ ಕ್ಯಾನನ್ ಬಳಸಿ ನೀರನ್ನು ಹಾರಿಸಿದಾಗ, ಕೆಲವು ವಿದ್ಯಾರ್ಥಿಗಳು ಚದುರಿ ಹೋಗದೆ ನೀರಿಗೆ ಎದುರಾಗಿ ನಿಂತು ಕುಣಿದು ಕುಪ್ಪಳಿಸಿದರು. ಉಪವಾಸ ಸತ್ಯಾಗ್ರಹದಲ್ಲಿದ್ದ ವಿದ್ಯಾರ್ಥಿ ನಾಯಕ ದೇವೇಂದ್ರ ಮಹತೋ ಮಾತನಾಡಿ, “ಪೊಲೀಸರು ತಡೆದರೆ ಅವರೊಂದಿಗೆ ಜಗಳವಾಡಬೇಡಿ, ಶಿಸ್ತುಬದ್ಧವಾಗಿ ಬೇರೆ ಮಾರ್ಗಗಳ ಮೂಲಕ ವಿಧಾನಸೌಧವನ್ನು ತಲುಪಲು ಪ್ರಯತ್ನಿಸಿ” ಎಂದು ಮನವಿ ಮಾಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಬೆಳಿಗ್ಗೆಯೇ ರೈಲು, ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ರಾಂಚಿಗೆ ಆಗಮಿಸಿದ್ದರು.

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಆಡಳಿತ ಮಂಡಳಿಯು ಪ್ರಮುಖ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ರಾಂಚಿಯ ಹೆಚ್ಚಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿತ್ತು. ಅಲ್ಲದೆ, ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಲುಪುವುದನ್ನು ತಡೆಯಲು ಜಿಲ್ಲೆಯ ಗಡಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸರು ತೀವ್ರ ವಾಹನ ತಪಾಸಣೆ ನಡೆಸಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!