ಕುಂದಾಪುರ(ಉಡುಪಿ): ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದ ಬಳಿಕ ಮದುವೆ ನಿರಾಕರಿ ಸಿದ ಆರೋಪಿಗೆ ಕುಂದಾಪುರದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ.

ಆರು ವರ್ಷಗಳ ಹಿಂದೆ ಈ ಪ್ರಕರಣ ನಡೆದಿತ್ತು. ಆರ್ಡಿ ಸಮೀಪದ ಕೊಂಜಾಡಿ ನಿವಾಸಿ ಪ್ರದೀಪ್ ನಾಯ್ಕ್ (36) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 2005ರಲ್ಲಿ ಹೊಸ ಮನೆಯ ಗಾರೆ ಕೆಲಸಕ್ಕೆಂದು ಬಂದಿದ್ದ ಪ್ರದೀಪ್, ಅಲ್ಲಿನ ಯುವತಿಯೊಂದಿಗೆ ಸ್ನೇಹ ಬೆಳಸಿದ್ದ. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಮದುವೆಯಾಗಲು ನಿರಾಕರಿಸಿದ್ದ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಂತ್ರಸ್ತ ಯುವತಿ ಹಾಗೂ ಆಕೆ ತಂದೆ-ತಾಯಿ ಸೇರಿ ಒಟ್ಟು 9 ಮಂದಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶ ನರಹರಿ ಪ್ರಭಾಕರ್ ಮರಾಠೆ ಅವರು ಶುಕ್ರವಾರ(ಜ.29) 10 ವರ್ಷ ಕಠಿಣ ಜೈಲು ಮತ್ತು 50 ಸಾವಿರ ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ ತಲಾ 1 ವರ್ಷ ಸಜೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದಲ್ಲಿ 50 ಸಾವಿರ ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.










