Wednesday, July 22, 2026
spot_imgspot_img
spot_imgspot_img

ಪಂಜಾಬ್‌ನಲ್ಲಿ ಹೈಟೆಕ್ ಪರೀಕ್ಷಾ ಅಕ್ರಮ ಬಯಲು; 35 ಮಂದಿ ಅರೆಸ್ಟ್‌

- Advertisement -
- Advertisement -

ಚಂಡೀಗಢ: ಪಂಜಾಬ್‌ನ ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಭಾನುವಾರ ನಡೆಸಿದ ಫಾರ್ಮಸಿ ಆಫೀಸರ್ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದ್ದ ಬೃಹತ್ ಹೈಟೆಕ್ ಪರೀಕ್ಷಾ ಅಕ್ರಮ ಜಾಲವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 28 ಅಭ್ಯರ್ಥಿಗಳು ಮತ್ತು 7 ಸೂತ್ರಧಾರಿಗಳು ಸೇರಿದಂತೆ ಒಟ್ಟು 35 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷೆಯಲ್ಲಿ ಮೋಸ ಮಾಡಲು ಗ್ಯಾಂಗ್ ಅತಿಸೂಕ್ಷ್ಮ ಪೆನ್ ಕ್ಯಾಮೆರಾಗಳು, ವೈರ್‌ಲೆಸ್ ಇಯರ್‌ಪೀಸ್‌ಗಳು ಮತ್ತು ಬ್ಯಾಟರಿ ಚಾಲಿತ ಸಂವಹನ ಸಾಧನಗಳನ್ನು ಬಳಸಿದ್ದು, ಪರೀಕ್ಷಾ ಕೇಂದ್ರಗಳಿಂದ ಒಟ್ಟು 27 ವೈರ್‌ಲೆಸ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪರೀಕ್ಷೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಅಭ್ಯರ್ಥಿಯೊಬ್ಬ ತನ್ನ ಬಳಿಯಿದ್ದ ಹಿಡನ್ ಪೆನ್ ಕ್ಯಾಮೆರಾ ಮೂಲಕ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಹರ್ಯಾಣದಲ್ಲಿದ್ದ ಗ್ಯಾಂಗ್ ಸದಸ್ಯರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದನು. ಅಲ್ಲಿಂದ ಉತ್ತರಗಳನ್ನು ಸಿದ್ಧಪಡಿಸಿ ಫರೀದ್‌ಕೋಟ್‌ನಲ್ಲಿ ತೆರೆಯಲಾಗಿದ್ದ ಕಂಟ್ರೋಲ್ ರೂಮ್ ಮೂಲಕ ಪರೀಕ್ಷಾ ಕೊಠಡಿಯಲ್ಲಿದ್ದ ಅಭ್ಯರ್ಥಿಗಳ ಇಯರ್‌ಪೀಸ್‌ಗಳಿಗೆ ನೇರವಾಗಿ ಮೈಕ್‌ನಲ್ಲಿ ಹೇಳಿ ಬರೆಸಲಾಗುತ್ತಿತ್ತು.

ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಪಾಸ್ ಮಾಡಿಕೊಡಲು ಈ ಅಂತರರಾಜ್ಯ ದಂಧೆಕೋರರ ಜಾಲವು ಪ್ರತಿಯೊಬ್ಬ ಅಭ್ಯರ್ಥಿಯಿಂದ 10 ಲಕ್ಷದಿಂದ 13 ಲಕ್ಷ ರೂ.ವರೆಗೆ ಹಣದ ಬೇಡಿಕೆಯಿಟ್ಟು ಡೀಲ್ ಕುದುರಿಸಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಶ್ನೆ ಪತ್ರಿಕೆಯು ಪರೀಕ್ಷೆಗೆ ಮುನ್ನ ಲೀಕ್ ಆಗಿರಲಿಲ್ಲ, ಬದಲಾಗಿ ಪರೀಕ್ಷೆ ಆರಂಭವಾದ ನಂತರವೇ ಹೈಟೆಕ್ ಸಾಧನಗಳ ಮೂಲಕ ಹೊರಗೆ ರವಾನಿಸಲಾಗಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!