


ಪುತ್ತೂರು: ಶತಮಾನಕ್ಕೂ ಅಧಿಕ ಶಿಕ್ಷಣ ಸೇವೆಯ ಪರಂಪರೆ ಹೊಂದಿರುವ ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕಡಬ ಅವರು ಆಯ್ಕೆಯಾಗಿದ್ದಾರೆ.
ಕೃಷ್ಣ ಶೆಟ್ಟಿ ಕಡಬ ಅವರು ಈ ಹಿಂದೆ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಕಡಬದವರಾದ ಅವರು, ಸರಸ್ವತಿ ವಿದ್ಯಾಲಯ ಕಡಬದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾದ ಕೃಷ್ಣ ಶೆಟ್ಟಿ ಕಡಬರವರು ಭಾರತೀಯ ಜನತಾ ಪಾರ್ಟಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸಹಕಾರ ಕ್ಷೇತ್ರದಲ್ಲಿ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
ಇದೀಗ ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜವಾಬ್ದಾರಿ ನಿಭಾಯಿಸಿರುವ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಸುಮಾರು ಹತ್ತು ವರ್ಷಗಳ ಕಾಲ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘ – ಶಿಕ್ಷಣ ಸೇವೆಯ ಶತಮಾನದ ಪರಂಪರೆ
1915ರಲ್ಲಿ ಪುತ್ತೂರು ಎಜುಕೇಶನ್ ಸೊಸೈಟಿ ಹೆಸರಿನಲ್ಲಿ ಸ್ಥಾಪನೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘವು, ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ವಿಸ್ತರಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಈ ಸಂಸ್ಥೆ ದಕ್ಷಿಣ ಕನ್ನಡ ಮತ್ತು ಕೇರಳ ಗಡಿಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.
1965ರಲ್ಲಿ ಆರಂಭಗೊಂಡ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಇಂದು ಸ್ವಾಯತ್ತ (Autonomous) ಶಿಕ್ಷಣ ಸಂಸ್ಥೆಯಾಗಿ ಬೆಳೆದಿದ್ದು, ಕಲೆ, ವಿಜ್ಞಾನ, ವಾಣಿಜ್ಯ, ಬಿಬಿಎ, ಬಿಸಿಎ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತಿದೆ.
ಹಚ್ಚ ಹಸಿರು ಆವರಣ ಹೊಂದಿರುವ ಕಾಲೇಜು, ಶೈಕ್ಷಣಿಕ ಸಾಧನೆ, ಸಂಶೋಧನೆ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರಸ್ತುತ ಈ ಸಂಸ್ಥೆಯ ಅಡಿಯಲ್ಲಿ ಕಿಂಡರ್‌ಗಾರ್ಟನ್‌ನಿಂದ ಹಿಡಿದು ಎಂಜಿನಿಯರಿಂಗ್, ಕಾನೂನು, ಬಿಸಿನೆಸ್ ಮ್ಯಾನೇಜ್‌ಮೆಂಟ್‌ವರೆಗಿನ 85ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 21,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿವೆ.
ಸ್ವಾಮಿ ವಿವೇಕಾನಂದರ “ಮಾನವ ನಿರ್ಮಾಣವೇ ಶಿಕ್ಷಣದ ಗುರಿ” ಎಂಬ ಆದರ್ಶವನ್ನು ಅಳವಡಿಸಿಕೊಂಡಿರುವ ಈ ಶಿಕ್ಷಣ ಸಂಸ್ಥೆ, ರಾಷ್ಟ್ರಭಕ್ತಿ, ಶಿಸ್ತು, ಸಂಸ್ಕಾರ ಹಾಗೂ ಸೇವಾ ಮನೋಭಾವ ಹೊಂದಿದ ವಿದ್ಯಾರ್ಥಿಗಳನ್ನು ರೂಪಿಸುವ ಕೇಂದ್ರವಾಗಿ ಹೆಸರುವಾಸಿಯಾಗಿದೆ.








