


ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಕ್ತರ ಭಾವನೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದ ಆಚರಣೆಗಳು ನಡೆಯುತ್ತಿವೆ ಎಂದು ಆರೋಪಿಸಿ, ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವತಿಯಿಂದ ಕ್ಷೇತ್ರದಲ್ಲಿ ಪ್ರಾರ್ಥನೆ ಮತ್ತು ಸೇವೆಯನ್ನು ಸಲ್ಲಿಸಲಾಯಿತು.
ಕ್ಷೇತ್ರದ ಪವಿತ್ರತೆ ಮತ್ತು ನಂಬಿಕೆಗೆ ಧಕ್ಕೆ ಬಾರದಂತೆ ಕಾಪಾಡುವ ಶಕ್ತಿಯನ್ನು ಕರುಣಿಸುವಂತೆ ಹಾಗೂ ಕ್ಷೇತ್ರದಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು. ದೇವಸ್ಥಾನಕ್ಕೆ ಹೊಸದಾಗಿ ನೇಮಕಗೊಂಡಿರುವ ವ್ಯವಸ್ಥಾಪನಾ ಸಮಿತಿಯು ಕ್ಷೇತ್ರದ ಜಾಗವನ್ನು ಬಳಸಿಕೊಂಡು ಸಾರ್ವಜನಿಕ ರಸ್ತೆಯನ್ನು ನಿರ್ಮಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಸಂರಕ್ಷಣಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
“ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ದೇವಸ್ಥಾನದ ಪವಿತ್ರ ಜಾಗವನ್ನು ಬಳಸಿಕೊಂಡು ರಸ್ತೆ ಮಾಡುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ” ಎಂದು ಮುಖಂಡರು ಸ್ಪಷ್ಟಪಡಿಸಿದರು. ಕ್ಷೇತ್ರದಲ್ಲಿ ನಡೆಯುತ್ತಿರುವ ಇಂತಹ ಹಲವು ಚಟುವಟಿಕೆಗಳು ಧಾರ್ಮಿಕ ನಿಯಮಗಳಿಗೆ ವಿರುದ್ಧವಾಗಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಮಹಾಲಿಂಗೇಶ್ವರ ದೇವರೇ ಸರಿಪಡಿಸಬೇಕೆಂದು ಪ್ರಾರ್ಥನೆಯಲ್ಲಿ ಉಲ್ಲೇಖಿಸಲಾಯಿತು.
ಹಿಂದೂ ಸಂಘಟನೆಗಳ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ, ಅನಿಲ್, ಹರಿಪ್ರಸಾದ್ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ ಹಾಗೂ ಸಂರಕ್ಷಣಾ ಸಮಿತಿಯ ಪ್ರಮುಖರು ದೇವಸ್ಥಾನದ ಪ್ರಧಾನ ಅರ್ಚಕರಿಗೆ ವಿಷಯವನ್ನು ವಿವರಿಸಿ, ಅವರ ಮೂಲಕ ದೇವಸ್ಥಾನದ ನಡೆಯಲ್ಲಿ ಸಂರಕ್ಷಣಾ ಸಮಿತಿಯ ಪರವಾಗಿ ಪ್ರಾರ್ಥನೆ ನೆರವೇರಿಸಿದರು. ಕ್ಷೇತ್ರದಲ್ಲಿ ಉಂಟಾಗಿರುವ ಎಲ್ಲಾ ರೀತಿಯ ಗೊಂದಲಗಳಿಗೂ ಶೀಘ್ರವೇ ತೆರೆ ಬೀಳಬೇಕು ಎಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಂರಕ್ಷಣಾ ಸಮಿತಿಯ ಹಲವಾರು ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.








