


ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿಸಿ ಯುವಕ ನಾಪತ್ತೆಯಾದ ಪ್ರಕರಣದ ಸಂತ್ರಸ್ಥೆಗೆ ನ್ಯಾಯ ದೊರಕಿಸಿಕೊಡುವ ಕುರಿತು ವಿಶ್ವಕರ್ಮ ಒಕ್ಕೂಟದ ನೇತೃತ್ವದಲ್ಲಿ ಸಮಾಜದ ತುರ್ತು ಸಭೆ ಜು.2ರಂದು ಕರ್ಮಲ ವಿಶ್ವಕರ್ಮ ಸಮಾಜ ಸೇವಾ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸಮಾಜಬಾಂಧವರ ಅಭಿಪ್ರಾಯ ಪಡೆದು ಮುಂದೆ ಸಂತ್ರಸ್ತೆಯನ್ನು ಭೇಟಿ ಮಾಡಿ ಅಲ್ಲಿಂದ ಮಹಿಳಾ ಪೊಲೀಸ್ ಠಾಣೆ ಹಾಗು ಎಸ್ಪಿಯವರಿಗೆ ಮನವಿ ನೀಡಿ ಒಂದೆರಡು ದಿನದಲ್ಲಿ ಯಾವುದೇ ಬೆಳವಣಿಗೆ ಇಲ್ಲದಿದ್ದ ಪಕ್ಷದಲ್ಲಿ ಸಮಾಜ ಬಾಂಧವರಿಂದ ಪ್ರತಿಭಟನೆ ನಡೆಸುವುದಾಗಿ ನಿರ್ಣಯಿಸಲಾಯಿತು.ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಅವರು ಮಾತನಾಡಿ, ಇವತ್ತು ನಮ್ಮ ಸಮಾಜ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಸಂತ್ರಸ್ತೆ ಮತ್ತು ತಾಯಿ ನಮ್ಮಲ್ಲಿ ಬಂದಿಲ್ಲ ಎಂಬ ವಿಷಯ ಬೇಡ. ಒಗ್ಗಟ್ಟು ಹಾಗೆ ಹೀಗೆ ಹೇಳುವಾಗ ನಮ್ಮ ಹಿಂದು ಮಗಳಿಗೆ ಅನ್ಯಾಯ ಆದಾಗ ಸುಮ್ಮನೆ ಕೂತುಕೊಳ್ಳಲಾಗುವುದಿಲ್ಲ. ನಮ್ಮ ಕಮ್ಯುನಿಟಿ ಆಗಲಿ ಇನ್ನೊಂದು ಕಮ್ಯುನಿಟಿ ಆಗಲಿ ಅದು ಸಣ್ಣ ವಿಷಯ ಅಲ್ಲ. ಯಾರೋ ಬಿಜೆಪಿ ಮುಖಂಡನ ಮಗ ನಮ್ಮ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದಾನೆ. ಈ ಕುರಿತು ನಾವು ಮೊದಲು ಆಕೆಯ ಮನೆಗೆ ಹೋಗಿ ಮಾತನಾಡಿ ಬಳಿಕ ಎಸ್ಪಿಗೆ ಮನವಿ ಕೊಡುವುದು. ಆ ಬಳಿಕ ಪೊಲೀಸರು ಕ್ರಮ ಸರಿಯಾಗಿ ಕೈಗೊಳ್ಳದಿದ್ದಲ್ಲಿ ನಾವು ಅನ್ಯಾಯ ಮಾಡಿದ ಯುವಕನ ಮನೆ ಮುಂದೆ ಮತ್ತು ಪೊಲೀಸ್ ಠಾಣೆ ಮುಂದೆ ಉಗ್ರ ಪ್ರತಿಭಟನೆ ಮಾಡಲಿದ್ದೇವೆ ಎಂದರು.