Friday, April 26, 2024
spot_imgspot_img
spot_imgspot_img

ಪುತ್ತೂರು: ಮತದಾರರ ಗುರುತಿನ ಚೀಟಿ ಅನಧಿಕೃತವಾಗಿ‌ ವಿತರಣೆ ಆರೋಪ; ಜನಸೇವಾ ಕೇಂದ್ರಕ್ಕೆ ಬೀಗ ಜಡಿದ ಅಧಿಕಾರಿಗಳು

- Advertisement -G L Acharya panikkar
- Advertisement -

ಪುತ್ತೂರು: ಮತದಾರರ ಗುರುತಿನ ಚೀಟಿಯನ್ನು ಅನಧಿಕೃತವಾಗಿ‌ ವಿತರಣೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಅಂಗಡಿಗೆ ಬೀಗ ಹಾಕಿದ ಘಟನೆ ನಡೆದಿದೆ.

ಪುತ್ತೂರಿನ ವ್ಯಕ್ತಿಯೊಬ್ಬರ ಮತದಾರನ ಗುರುತಿನ ಚೀಟಿ ಕಳೆದುಹೋಗಿದ್ದು, ಅವರು ಜನ ಸೇವಾ ಕೇಂದ್ರಕ್ಕೆ ಬಂದು ವಿಷಯ ತಿಳಿಸಿದ್ದರು. ಓಟರ್ ಐಡಿ ಮತ್ತೆ ದೊರಕಿಸುವ ಸಂಬಂಧ ಆನ್ ಲೈನ್ ಅರ್ಜಿ ಪ್ರಕ್ರಿಯೆ ನಡೆಸಿ ಕೇಂದ್ರದಲ್ಲೇ ಗುರುತಿನ ಚೀಟಿ ಮುದ್ರಿಸಿ ಕೊಡಲಾಗಿದೆ ಎಂದು ಆಪಾದಿಸಲಾಗಿದೆ. ಗುರುತಿನ ಚೀಟಿಯ ಮೇಲೆ ಅನುಮಾನ ಬಂದ ಕಾರಣ ಅವರು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ತೆರಳಿ ತೋರಿಸಿದರು ಎನ್ನಲಾಗಿದೆ. ಅಧಿಕಾರಿಗಳು ತಪಾಸಣೆ ನಡೆಸಿದಾಗ ಹೊರಗಿನ‌ ಕೇಂದ್ರದಲ್ಲಿ ಓಟರ್ ಐಡಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ ಕೇಂದ್ರದ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ನಿಸರ್ಗ ಪ್ರಿಯ ಮತ್ತು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದು, ಪೊಲೀಸ್ ಬಂದೋಬಸ್ತ್ ನಲ್ಲಿ ತನಿಖೆ ನಡೆಸಲಾಯಿತು.

ಈ ಕುರಿತು ಮಾತನಾಡಿದ ಸಹಾಯಕ ಆಯುಕ್ತರು ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಅಪರಾಧ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಹ್ಯ ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿ ವಿತರಣೆ ಮಾಡುವ ಅಧಿಕಾರವನ್ನು ನಾವು ಯಾರಿಗೂ ಕೊಟ್ಟಿಲ್ಲ. ಆದರೂ ಈ ಕೇಂದ್ರದಲ್ಲಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಕಾಡ್೯ ವಶಪಡಿಸಿಕೊಂಡು ಕೇಂದ್ರಕ್ಕೆ ಬೀಗ ಹಾಕಿದ್ದೇವೆ. ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನಾವು ಏನೂ ತಪ್ಪು ಮಾಡಿಲ್ಲ. ನಮ್ಮ ಜನಸೇವಾ ಕೇಂದ್ರದಲ್ಲಿ ನಿರ್ದಿಷ್ಟ ವೆಬ್ ಸೈಟ್ ತೆರೆದುಕೊಂಡ ಕಾರಣ ನಮ್ಮ ಸಿಬ್ಬಂದಿ ಲಾಗಿನ್ ಆಗಿ ಅರ್ಜಿ ಪ್ರಕ್ರಿಯೆ ನಡೆಸಿ ಕಾರ್ಡ್‌ ಮುದ್ರಿಸಿಕೊಟ್ಟಿದ್ದಾರೆ. ಇದರ ಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಗೆ ಪ್ರಾಯೋಗಿಕವಾಗಿ ಮಾಡಿತೋರಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ. ಸರಕಾರಿ ಅಧಿಕಾರಿಗಳ, ಚುನಾವಣಾ ಆಯೋಗದ ಅಧಿಕಾರಿಗಳ ಸಹಿ ಫೋರ್ಜರಿ ಮಾಡಲು ನಮಗೆ ಸಾಧ್ಯವೇ..?? ನಾವು ಉದ್ದೇ ಶಪೂರ್ವಕವಾಗಿ ತಪ್ಪು ಮಾಡಿಲ್ಲ ಎಂದು ಕೇಂದ್ರದ ಮಾಲಕಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!