



ಮಂಗಳೂರು: ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ. ರಾವ್ ಕಾಲೇಜು ಸಹಪಾಠಿ ವಿದ್ಯಾರ್ಥಿನಿಗೆ ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾದ ಬಳಿಕ ಮದುವೆಯಾಗಲು ನಿರಾಕರಿಸಿ, ಆಕೆಗೆ ಮಗು ಕರುಣಿಸಿದ ಪ್ರಕರಣಕ್ಕೆ ಸಂಬಂಧಿಸಿ ತಾಯಿಯಾಗಿರುವ ವಿದ್ಯಾರ್ಥಿನಿ ತನಗೆ ಬೆದರಿಕೆಯಿದ್ದು, ಪೊಲೀಸ್ ರಕ್ಷಣೆ ನೀಡುವಂತೆ ತನ್ನ ಮಗು ಮತ್ತು ತಾಯಿ ಜೊತೆ ಆಗಮಿಸಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾಳೆ.
ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಸೋಮವಾರ ಆಗಮಿಸಿದ ಯುವತಿ ಈ ಕುರಿತು ಮನವಿ ಸಲ್ಲಿಸಿದ್ದು, “ಇತ್ತೀಚೆಗೆ ನನ್ನ ಮನೆಯ ಸುತ್ತಮುತ್ತ ಕೆಲವು ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿದ್ದಾರೆ. ರಾತ್ರಿಯ ವೇಳೆ ಅಪರಿಚಿತರು ಸಂಚರಿಸುತ್ತಿರುವುದು ನಾನು ಮತ್ತು ನನ್ನ ತಾಯಿ ಗಮನಿಸಿದ್ದೇವೆ. ನನಗೆ ಆಗಿರುವ ವಂಚನೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವುದು ನನ್ನ ಮಗುವಿನಿಂದ ಮಾತ್ರ. ಆದ್ದರಿಂದ ನನ್ನ ಮಗುವಿನ ಜೀವಕ್ಕೆ ಯಾರಿಂದಲಾದರೂ ಅಪಾಯವಾಗುವ ಕುರಿತು ಭಯವಿದೆ. ಆದ್ದರಿಂದ ನನಗೆ ಮತ್ತು ನನ್ನ ಮಗುವಿಗೆ ಪೊಲೀಸ್ ರಕ್ಷಣೆ ನೀಡಬೇಕು” ಎಂದು ಮನವಿ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಆರೋಪಿಯ ತಂದೆಗೆ ತಿಳಿಸಿದ್ದೇನೆ. ಇಬ್ಬರಿಗೂ ಆದಷ್ಟು ಬೇಗ ಮದುವೆ ಮಾಡಿ, ಆತ ಜೈಲಲ್ಲಿಯೇ ಇರುವುದು ಬೇಡ. ಚಿನ್ನದಂತ ಮಗುವಿದೆ. ಇನ್ನೇನು ಬೇಕು ಎಂದು ಹೇಳಿದ್ದೇನೆ. ಇದರಿಂದ ಎರಡೂ ಕುಟುಂಬಗಳಿಗೆ ಸಮಸ್ಯೆಯಾಗುತ್ತದೆ ಎಂದಿದ್ದೇನೆ. ಇದಕ್ಕೆ ಒಪ್ಪದಿದ್ದರೆ ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುತ್ತೇವೆ. ಹೇಗಾದರೂ ಮಾಡಿ ಯುವತಿಗೆ ಮೋಸವಾಗಲು ಬಿಡುವುದಿಲ್ಲ ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಡಿ ಎಚ್ಚರಿಕೆ ನೀಡಿದ್ದಾರೆ.








