


ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣ ಇದೀಗ ನ್ಯಾಯಾಲಯದ ಹಂತದಲ್ಲಿದೆ. ವಂಚನೆಗೊಳಗಾದ ಸಂತ್ರಸ್ತೆಯ ತಾಯಿ ಇದೀಗ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ನನ್ನ ಮಗಳಿಗೆ ಅನ್ಯಾಯ ಮಾಡಿದವನ ಜೊತೆಗೆ ರಿಜಿಸ್ಟರ್ಡ್ ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ಬಳಿಕ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮತ್ತು ಕಾನೂನು ತಜ್ಞರನ್ನು ಭೇಟಿ ಮಾಡಿ ಮುಂದಿನ ಹಾದಿಯ ಬಗ್ಗೆ ಚರ್ಚಿಸಿದ್ದಾರೆ.
ಆರೋಪಿ ಯುವಕ ಶ್ರೀಕೃಷ್ಣ ಜೆ.ರಾವ್ ಬಂಧಿತನಾಗಿ ನ್ಯಾಯಾಂಗ ಸೆರೆಯಲ್ಲಿದ್ದಾನೆ. ಮಗಳಿಗಾದ ಅನ್ಯಾಯದ ವಿರುದ್ಧ ದಿಟ್ಟತನದಿಂದ ಹೋರಾಟಕ್ಕಿಳಿದು ಆರೋಪಿ ದಸ್ತಗಿರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಯುವತಿಯ ತಾಯಿಯು ಇದೀಗ ಮಗಳ ಮದುವೆಗಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಾನೂನು ತಜ್ಞರ ಜೊತೆಗೂ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ನಾನು ಎಸ್ಪಿಯವರನ್ನು ಭೇಟಿ ಮಾಡಿದ್ದೇನೆ. ಅಲ್ಲಿ ಅವರು ಹುಡುಗನಲ್ಲಿ ಮಾತನಾಡಿ ಆತ ನಾನು ಜೈಲಿನಲ್ಲೇ ಇರುತ್ತೇನೆ ಹೊರತು ಆಕೆಯನ್ನು ಮದುವೆ ಆಗುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಆತನಿಗೆ ಶಿಕ್ಷೆಯಾಗಬೇಕೆಂದು ಹೋರಾಟ ಮಾಡುತ್ತಿಲ್ಲ. ಇಬ್ಬರಿಂದಲೂ ತಪ್ಪಾಗಿದೆ. ಆ ತಪ್ಪನ್ನು ಸರಿ ಮಾಡುವ ಕಾಲ ಈಗ ಬಂದಿದೆ. ಅದಕ್ಕಾಗಿ ಆತ ನನ್ನ ಮಗಳನ್ನು ರಿಜಿಸ್ಟರ್ಡ್ ಮದುವೆಯಾಗಬೇಕು ಎಂದು ಸಂತ್ರಸ್ತೆಯ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾನು ಇಷ್ಟೇ ಹೇಳುವುದು. ರಿಜಿಸ್ಟರ್ ಮದುವೆ ಮಾಡಿಕೊಡಿಸಿ, ನನಗೆ ಅವನ ಆಸ್ತಿ, ಅಂತಸ್ತು ಬೇಡ. ಅವರು ಮದುವೆಗೆ ಒಪ್ಪಿ ನನಗೆ ಮುಚ್ಚಳಿಕೆ ಪತ್ರ ಕೊಟ್ಟಿದ್ದಾರೆ. ಈಗ ಆಗುವುದಿಲ್ಲ ಎಂದು ಹೇಳಿದರೆ ಅರ್ಥ ಉಂಟಾ. ಈಗ ಕಾನೂನು ಹೇಳ್ತದಂತೆ ಹುಡುಗನಿಗೆ ಒಪ್ಪಿಗೆ ಇಲ್ಲದಿದ್ದರೆ ಮದುವೆ ಮಾಡಲು ಆಗುವುದಿಲ್ಲ ಎನ್ನುತ್ತಾರೆ. ಸರಿ ಇದನ್ನು ನಾನು ಒಪ್ಪುತ್ತೇನೆ. ಅದೇ ಕಾನೂನು ಹುಡುಗನಿಗೆ 21 ವರ್ಷ ಆಗುವಾಗ ಮದುವೆ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದು. ಆಗ ಅವರು ಹುಡುಗನನ್ನು ಹೇಗೆ ಅಡಗಿಸಿದ್ದು. ನಾನಿಷ್ಟೆ ಹೇಳುವುದು ನನ್ನ ಮಗಳಿಗೆ ಯುವಕನ ಜೊತೆ ಮದುವೆ ಮಾಡಿಸಿಕೊಡಿ ಎಂದು ಸಂತ್ರಸ್ತೆಯ ತಾಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.