ಪುತ್ತೂರು:- ದ.ಕ. ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಪುತ್ತೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ನಗರದಲ್ಲಿ ಇಂದು ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಮಾತ್ರ ಬಹಳ ವಿರಳವಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಕೆಲವೊಂದು ದ್ವಿಚಕ್ರ ವಾಹನ, ಸರಕು ಸಾಗಾಟದ ವಾಹನ, ರಿಕ್ಷಾ ಹಾಗೂ ಕೆಲವೊಂದು ಅಗತ್ಯ ಖಾಸಗಿ ವಾಹನಗಳ ಓಡಾಟವನ್ನು ಬಿಟ್ಟರೆ ಉಳಿದಂತೆ ಬಸ್, ಟೂರಿಸ್ಟ್ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತವಾಗಿದೆ.
ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳು, ಅಗತ್ಯ ಸೇವೆಗಳ ಕಛೇರಿಗಳು ತೆರೆದಿದೆ. ಆದರೆ ಗ್ರಾಹಕರ ಸಂಖ್ಯೆ ಮಾತ್ರ ಕಂಡು ಬರುತ್ತಿಲ್ಲ. ಅನಗತ್ಯ ಜನರ ಓಡಾಟ ನಡೆಸದೆ ಲಾಕ್‌ಡೌನ್‌ಗೆ ಸಂಪೂರ್ಣ ಬೆಂಬಲ ನೀಡಿರುವ ಲಕ್ಷಣ ಪುತ್ತೂರಿನಲ್ಲಿ ಕಂಡು ಬರುತ್ತಿದೆ.ನಗರ ಪೇಟೆ ಪ್ರವೇಶಿಸುವ ಎಲ್ಲಾ ಒಳರಸ್ತೆಗಳನ್ನು ಬ್ಯಾರಿಕೇಡ್ ಇಟ್ಟು ಪೊಲೀಸರು ಬಂದ್ ಮಾಡಿದ್ದಾರೆ. ಮುಖ್ಯರಸ್ತೆಯ ಪ್ರಮುಖ ಜಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅನಗತ್ಯ ಬರುವವರನ್ನು ವಾಪಾಸು ಮನೆಗೆ ಕಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.