(ನ.15): ಹೊಳೆಯಲ್ಲಿ ಮೀನು ಹಿಡಿಯಲೆಂದು ಬಲೆ ಹಾಕಿ ನೀರಿಗೆ ಇಳಿದ ವ್ಯಕ್ತಿಯೋರ್ವರು ಕಣ್ಮರೆಯಾದ ಘಟನೆ ಇರ್ದೆ ಗ್ರಾಮದ ದೂಮಡ್ಕ ಸಮೀಪ ನೆಲ್ಯಾರ್ಣೆ ಬಲ್ಯಂದ್ರ ಗಯದಲ್ಲಿ ನಡೆದಿದೆ.
ಆರ್ಲಪದವು ನಿವಾಸಿ ನಾರಾಯಣ ಅವರು ನೀರಿನಲ್ಲಿ ಮುಳುಗಿ ಕಣ್ಮರೆಯಾದವರು.ಅವರು ಒಡ್ಯದಲ್ಲಿರುವ ತನ್ನ ಮೂವರು ಸಂಬಂಧಿಕರೊಂದಿಗೆ ಮೀನು ಹಿಡಿಯಲೆಂದು ಇರ್ದೆ ಗ್ರಾಮದ ದೂಮಡ್ಕ ಸಮೀಪ ಹರಿಯುವ ಸೀರೆ ಹೊಳೆಯ ನೆಲ್ಯಾರ್ಣೆ ಬಲ್ಯಂದ್ರ ಗಯದಲ್ಲಿ ಮೀನು ಹಿಡಿಯಲು ಹೊಳೆಗೆ ಇಳಿದಿದ್ದರು. ನಾರಾಯಣ ಅವರು ಮೀನು ಹಿಡಿಯಲೆಂದು ಹೊಳೆಗೆ ಇಳಿದು ಬಲೆ ಕಟ್ಟುತ್ತಿದ್ದವರು ಕಣ್ಮರೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ತೆರಳಿದ್ದು ರಾತ್ರಿ ಆದ್ದರಿಂದ ಶೋಧ ಕಾರ್ಯ ನಡೆಸಲಾಗದೆ ಹಿಂದಿರುಗಿದ್ದಾರೆ ಎಂದು ತಿಳಿದು ಬಂದಿದೆ.
ಮದುಮಗಳಿಗೆ ಬಂಗಾರ ಸಿಗುತ್ತಿದ್ದ ಗಯ:
ಪುರಾತನ ಕಾಲದಲ್ಲಿ ಮದುವೆಗಾಗಿ ಮದುಮಗಳಿಗೆ ಬಂಗಾರ ಬೇಕು ಎಂದು ಗಯದ ಬಳಿ ಬಂದು ಬಾಳೆ ಎಲೆಯಲ್ಲಿ ಅಕ್ಕಿ, ತೆಂಗಿನ ಕಾಯಿ ಇಟ್ಟು ಪ್ರಾರ್ಥಿಸಿದರೆ ಮರುದಿನ ಅದೇ ಸಮಯದಲ್ಲಿ ಮದುವೆಗೆ ಬೇಕಾದ ಬಂಗಾರ ದೊರೆಯುತ್ತಿತ್ತು.ಮದುವೆ ಮುಗಿದ ಬಳಿಕ ಪುನಃ ಅದೇ ರೀತಿ ಬಂಗಾರವನ್ನು ಅಲ್ಲಿ ಹಿಂದಿರುಗಿಸಬೇಕಾಗಿತ್ತು ಎಂದು ಈ ಭಾಗದ ಹಿರಿಯರು ಹೇಳುತ್ತಾರೆ.ಇದೊಂದು ಐತಿಹಿತ್ಯವುಳ್ಳ ಪುರಾತನ ಗಯವಾಗಿದ್ದು ಹಿಂದೊಮ್ಮೆ ಇದೇ ಗಯಕ್ಕೆ ದೈವ ನರ್ತಕರೋರ್ವರು ಬಿದ್ದು ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.