Sunday, May 19, 2024
spot_imgspot_img
spot_imgspot_img

ಪುತ್ತೂರು: ಶಾಂತಿನಗರ ಮಹಾವಿಷ್ಣು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಸಭೆ;ಬಾಗುವಿಕೆ ಇದ್ದಲ್ಲಿ ಭಗವಂತನ ಸಾನಿಧ್ಯ ಇರುತ್ತದೆ: ಡಾ. ವಿಜಯ ಸರಸ್ವತಿ

- Advertisement -G L Acharya panikkar
- Advertisement -

ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮೇ 6 ರಂದು ರಾತ್ರಿ ಧಾರ್ಮಿಕ ಸಭೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಡಾ. ವಿಜಯ ಸರಸ್ವತಿ ಅವರು ಮಾತನಾಡಿ ಬಾಗುವಿಕೆ ಇದ್ದಲ್ಲಿ ಭಗವಂತನ ಸಾನಿಧ್ಯ ಇರುತ್ತದೆ. ಶರಣಾಗತಿ ಇರುವಲ್ಲಿ ಅಹಂಕಾರ ಇರುವುದಿಲ್ಲ, ಧರ್ಮ ಜಾಗೃತಿ ಆಗುವುದೇ ಪರಿವರ್ತನೆ ಆಗಿದೆ. ಪರಿವರ್ತನೆ ಆಗುವುದೇ ಸಾರ್ಥಕತೆಯಾಗಿದೆ ಎಂದರು. ಶಾಂತಿನಗರ ಮಹಾವಿಷ್ಣು ದೇವಸ್ಥಾನ ಹಲವು ರೀತಿಯಲ್ಲಿ ನಾಡಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಧಾರ್ಮಿಕ ಚಿಂತನೆಗಳು, ಅಲೋಚನೆಗಳು ನಮ್ಮನ್ನು ಶ್ರೇಷ್ಠವನ್ನಾಗಿಸುತ್ತದೆ ಎಂದರು. ಭಜನೆ ಇದ್ದಲ್ಲಿ ವಿಭಜನೆ ಇಲ್ಲ, ಭಜಕರನ್ನು ಭಗವಂತನ ಕಡೆಗೆ ಕೊಂಡೊಯ್ಯುವುದೇ ಭಜನೆ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿಯವರು ಉಪನ್ಯಾಸ ನೀಡಿದರು.

ದೇವಳದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ ಅಧ್ಯಕ್ಷತೆ ವಹಿಸಿದ್ದರು. ತೇಜಸ್ವಿನಿ ಕುಕ್ಕಿಲ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ನಿಕಟಪೂರ್ವ ಆಡಳಿತ ಮೊಕ್ತೇಸರ ಯು.ಜಿ. ರಾಧ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಖರ ಪೂಜಾರಿ ಜೇಡರಪಾಲು ವಂದಿಸಿದರು. ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಜಿಲ್ಲೆಯ ಸುಪ್ರಸಿದ್ಧ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ಸತೀಶ್ ಆಚಾರ್ಯ ಮಾಣಿರವರ ಸಂಯೋಜನೆಯೊಂದಿಗೆ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ ನಡೆಯಿತು.

ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮೇ. 5ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ ಮತ್ತು ತುಲಾಭಾರ ಸೇವೆ ನಡೆಯಿತು. ಮೇ. 5ರಂದು ಬೆಳಿಗ್ಗೆ ದೇವಳದಲ್ಲಿ ನಿತ್ಯ ಮಹಾಪೂಜೆಯ ನಂತರ ಶಾಂತಿನಗರ ಪೂಜಾ ಮೈದಾನದಿಂದ ಭಜನೆಯೊಂದಿಗೆ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು. ಬಳಿಕ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದ್ದರು.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ. 6ರಂದು ಬೆಳಿಗ್ಗೆ ನಿತ್ಯ ಮಹಾಪೂಜೆ, ಶ್ರೀ ಗಣಪತಿ ಹವನ, ಕಲಶಪೂಜೆ ಪ್ರಾರಂಭ, ಅಶ್ವತ್ಥ ಕಲ್ಪೋಕ್ತ ಪೂಜೆ, ಶ್ರೀ ರಕ್ತೇಶ್ವರಿ ಸಹಿತ ಪರಿವಾರ ದೈವಗಳಿಗೆ ತಂಬಿಲ, ಶ್ರೀ ನಾಗದೇವರಿಗೆ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಕಲಶಪೂಜೆ ಮತ್ತು ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಮಡಂತ್ಯಾರು ಶ್ರುತಿಲಯ ಕ್ಲಾಸಿಕಲ್ಸ್‌ನ ವಿದುಷಿ ಶ್ಯಾಮಲಾ ನಾಗರಾಜ್ ಭಟ್ ಕುಕ್ಕಿಲ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರಗಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ನಂತರ ಆದರ್ಶನಗರ ಶ್ರೀರಾಮ ಭಜನಾ ಮಂಡಳಿ, ಉಪ್ಪಿನಂಗಡಿ ರಾಮನಗರ ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ, ಕೋಡಿಂಬಾಡಿ ಧರ್ಮಶ್ರೀ ಭಜನಾ ಮಂಡಳಿ ಮತ್ತು ಶಾಂತಿನಗರ ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ ವಿತರಣೆ ನಡೆಯಿತು.

- Advertisement -

Related news

error: Content is protected !!