Sunday, June 7, 2026
spot_imgspot_img
spot_imgspot_img

ಪುತ್ತೂರು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯಾಲಯ ಭೂಮಿ ಪೂಜೆಗೆ ಆಗಮಿಸಿದ ಅರುಣ್ ಪುತ್ತಿಲರನ್ನು ತಡೆದ ಹಿಂದೂ ಕಾರ್ಯಕರ್ತರು; ಹೊಯಿಕೈ

- Advertisement -
- Advertisement -

ಪುತ್ತೂರು: ವಿಶ್ವಹಿಂದೂ ಪರಿಷತ್‌‌ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆ ಹಾಗೂ ಆ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳ ನಡುವೆ ಉಂಟಾದ ರಾಜಕೀಯ ವಿಪ್ಲವದ ಮುಂದುವರಿದ ಭಾಗವಾಗಿ ಈ ಹೊಯಿಕೈ ನಡೆದಿದೆ ಎಂದು ತಿಳಿದು ಬಂದಿದೆ.

ಪುತ್ತೂರಿನ ಎಸ್ ಡಿಸಿಸಿ ಬ್ಯಾಂಕ್ ಮುಂಭಾಗದ ಈ ಹಿಂದಿನ ವಿಶ್ವ ಹಿಂದೂ ಪರಿಷತ್‌ ಕಾರ್ಯಾಲಯವಿದ್ದ ಸ್ಥಳದಲ್ಲಿ ಇಂದು ವಿಶ್ವ ಹಿಂದೂ ಪರಿಷತ್‌ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯದ ನರಸಿಂಹಸ್ವಾಮಿ ಸಂಪುಟ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಅರುಣ್ ಕುಮಾ‌ರ್ ಪುತ್ತಿಲ ಹಾಗೂ ಮೂವರು ಬೆಂಬಲಿಗರು ಜತೆಗೂಡಿ ಈ ಸಮಾರಂಭಕ್ಕೆ ಆಗಮಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಹಿಂದೂ ಜಾಗರಣೆ ವೇದಿಕೆಯ ಮುಂಚೂಣಿಯಲ್ಲಿರುವ ಕೆಲ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ತನ್ನ ಕಾರಿನಿಂದ ಇಳಿಯುತ್ತಿದ್ದ ಪುತ್ತಿಲರನ್ನು ತಡೆದಿದ್ದಾರೆ.

ಈ ವೇಳೆ ಅವರ ಜೊತೆಗಿದ್ದ ಪುತ್ತೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಪುತ್ತಿಲ ನೆರವಿಗೆ ದಾವಿಸಿದ್ದು ಪುತ್ತಿಲರನ್ನು ತಡೆಯಲು ಯತ್ನಿಸುತ್ತಿದ್ದ ಕಾರ್ಯಕರ್ತರ ಜತೆ ವಾಗ್ವಾದ ನಡೆಸಿದ್ದಾರೆ. ಆ ಕಾರ್ಯಕರ್ತರ ಗುಂಪಿನಲ್ಲಿ ಹಿಂದೂ ಸಂಘಟನೆಗಳ ಮುಖಂಡರಾದ ದಿನೇಶ್ ಪಂಜಿಗೆ, ಶ್ರೀಧರ್ ತೆಂಕಿಲ, ಜಯಂತ್ ಬಲ್ನಾಡು, ಜಿತೇಶ್ ಬಲ್ನಾಡು, ಜಯಂತ್ ಕುಂಜುರುಪಂಜ ಮುಂತಾದವರು ಇದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಅನಿಲ್ ತೆಂಕಿಲ ಮತ್ತು ಹಿಂದೂ ಸಂಘಟನೆಯಗಳ ಕಾರ್ಯಕರ್ತರ ಮಧ್ಯೆ ಹೋಯ್ ಕೈ ನಡೆದು ಪರಸ್ಪರ ಹಲ್ಲೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ವೇಳೆ ವಿಶ್ವ ಹಿಂದೂ ಪರಿಷತ್‌‌ನ ಹಿರಿಯ ಮುಖಂಡರಾದ ಯು ಪೂವಪ್ಪನವರು ಘಟನಾ ಸ್ಥಳಕ್ಕೆ ಆಗಮಿಸಿ ಗಲಾಟೆಯನ್ನು ನಿಯಂತ್ರಿಸಿ ಅರುಣ್ ಪುತ್ತಿಲರನ್ನು ಅವರ ಜತೆಗಿದ್ದ ಪುತ್ತೂರು ಬಿಜೆಪಿಯ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್, ಅನಿಲ್ ತೆಂಕಿಲರವರನ್ನು ಸಭಾಂಗಣಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಅರುಣ್‌ ಪುತ್ತಿಲ ಮತ್ತು ಪುತ್ತಿಲ ಪರಿವಾರದ ಕೆಲವು ಸದಸ್ಯರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರನ್ನು, ಮತ್ತು ಸಂಘಟನೆಯ ಮುಖಂಡರನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು ಮತ್ತು ಅವರಿಗೆ ಅವಮಾನ ಮಾಡಿದ್ದರು. ಇದನ್ನೇ ಗುರಿಯಾಗಿಸಿಕೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ಅಂತ ಅವಮಾನ ಮಾಡಿದವರು ಈ ಕಾರ್ಯಕ್ರಮಕ್ಕೆ ಬರುವುದು ಎಷ್ಟು ಸೂಕ್ತ ಎಂದು ಪ್ರಶ್ನೆ ಮಾಡಿ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!