Monday, April 29, 2024
spot_imgspot_img
spot_imgspot_img

ಪಾಶ್ಚಾತ್ಯ ಬಳುವಳಿಗಳ ತಳಮಳ – ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

ನಾವು ಭಾರತೀಯರೆಂದು ಹೆಮ್ಮೆಯಿಂದ ಹೇಳುತ್ತೇವೆ. ವಿಭಿನ್ನ ಭಾಷೆ, ಭಿನ್ನಜನ, ವಿವಿಧ ಸಂಸ್ಕೃತಿ, ಹಲವು ಜಾತಿ ಮತ, ಹೆಚ್ಚಾಗಿ ಪೂರ್ಣ ಪ್ರಜಾಪ್ರಭುತ್ವ ಹೊಂದಿದವರೆಂದೂ ಬೀಗುತ್ತೇವೆ. ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿಸುವ, ಬಡವರನ್ನು ಸಿರಿವಂತರನ್ನಾಗಿಸುವ, ಹಳ್ಳಿಗಳನ್ನು ಆಧುನಿಕತೆಯತ್ತ ವಾಲಿಸುವ ಪ್ರಯತ್ನ ಸರಕಾರವು ಸೇರಿ, ಆರ್ಥಿಕತೆಯಲ್ಲಿ ಬಲವಿರುವ ಸಂಸ್ಥೆಗಳಿಂದ ನಡೆಯುತ್ತಲೇ ಇದೆ. ಅಲ್ಲಿ ಸಫಲತೆಯನ್ನೂ ಕಂಡಿದ್ದೇವೆ. ಜೊತೆಯಲ್ಲೇ ಸುಧಾರಿತ ಬದುಕು, ಉದ್ಯೋಗ, ಗಳಿಕೆಯ ದಾರಿ ತೋರಿ ಧನ ಸಂಪಾದನೆ ಮಾಡಿಕೊಟ್ಟಿದೆ. ಇನ್ನೊಂದೆಡೆ “ಉಪ್ಪರಿಗೆ ಮನೆಯವರಾದರೂ ಉಪ್ಪಿಲ್ಲದೆ ಉಣ್ಣಲಾರರು” ಎಂಬಂತೆ ಅನ್ನದಾತರ ವಿರಳತೆ ದೂರದಲ್ಲೊಂದು ಭಯದ ಸೂಚನೆಯನ್ನು ಮತ್ತೆ ಮತ್ತೆ ತೋರಿಸುತಿದೆ. ರೈತನಿಲ್ಲದ ದೇಶದ ಕಲ್ಪನೆ ಊಹಿಸಲು ಸಾಧ್ಯವೇ ಹೇಳಿ. ಆಹಾರಕ್ಕಾಗಿ ಪರ ದೇಶದ ಅವಲಂಬನೆ ಅಬ್ಬಾ…. ಆ ದಿನ ಬರುವುದೇ ಬೇಡ ಅನಿಸುತ್ತದೆ.


ನಮ್ಮ ಜನರ ಅಂದಿನ ಬದುಕಿನ ಸೌಂದರ್ಯ ನೆಮ್ಮದಿ, ತ್ಯಾಗ, ಶಾಂತಿ, ಆರೋಗ್ಯಕರ, ಬದುಕಿನದ್ದಾಗಿತ್ತೇ ಹೊರತು ಕಿತ್ತು ತಿಂದು ಇನ್ನೊಬ್ಬರ ನೋವಿಗೆ ಹೇತುವಾಗಿರಲಿಲ್ಲ. ಐಶಾರಾಮದ ಬದುಕಿನ ಶೈಲಿ ಪಾಶ್ಚಾತ್ಯರಿಂದ ನಾವು ಕಲಿತುಕೊಂಡ ಬಳುವಳಿಗಳಷ್ಟೇ. ಪಾಶ್ಚಿಮಾತ್ಯ ಬದುಕಲ್ಲಿ ನಾನು ನನ್ನದು ಮಾತ್ರ ಸಾಕೆಂಬ ಸತ್ವಹೀನತೆ ಕಾಣುತಿದೆಯಲ್ಲದೆ ರಸಭರಿತ ಸಂಬಂಧದ ಬದುಕಿಲ್ಲ. ಕೃಷಿ ಅವಲಂಬಿತ ಅವಿಭಕ್ತ ಕುಟುಂಬ ಹೊಂದಿರುವ ಭಾರತದ ಪವಿತ್ರತೆ, ಸನಾತನತೆ ಎಂಬುದಕ್ಕೆ ಬಲಕೊಟ್ಟಿರುವುದು ಜನರು ಸತ್ಯ-ಧರ್ಮದ ಮೇಲೆ ಇಟ್ಟಿರುವ ನಂಬಿಕೆಯಿಂದ. ನಮ್ಮ ಸುಸಂಸ್ಕೃತ ಮನಸ್ಸುಗಳು ಪರ ದೇಶದ ರಿಯಲ್, ಧಿರಂ, ಡಾಲರ್ ಮುಂತಾದವುಗಳ ದಾಹಕ್ಕೆ ಸ್ವದೇಶದ ಜ್ಞಾನವನ್ನು ಮಾರಬಯಸಿ ಪರವಲಂಬನೆಯ ದಾರಿ ತುಳಿದ ಸನ್ನಿವೇಶ ವಿದ್ರಾವಕ. ಆವಾಗಲೇ ನಾವೆಲ್ಲಾ ಬಲಿಯಾದುದು ಪಾಶ್ಚಿಮಾತ್ಯರ ನಿತ್ಯಕರ್ಮ ಮತ್ತು ಆಧುನಿಕತೆಗೆ. ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎಂದು ಹೊಟ್ಟೆಕಟ್ಟಿ, ಸಂಸಾರ ತ್ಯಾಗ ಮಾಡಿ ಹಣ ಸಂಪಾದಿಸಿ ಭಾರತದ ತನ್ನವರ ಐಶ್ವರ್ಯದ ಬದುಕಿಗೆ ಹೇತುವಾಗುತ್ತಿರುವ NRE ಎಂದೆನಿಸುವವರ ಸಂಕಟ ಇಲ್ಲಿ ಅದರ ಪ್ರತಿಫಲ ಅನುಭವಿಸುವವರಿಗೆ ಅರಿವಿಲ್ಲ ಬಿಡಿ.


24 ಗಂಟೆಗಳನ್ನೂ ಇತರರಿಗಾಗಿ ದುಡಿದು, ತನ್ನ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳನ್ನು , ವಿದೇಶಿಯ ಪದ್ದತಿಯ ಜೀವನ ಶೈಲಿಯನ್ನು, ಸಂಸಾರ ಸಾರ ಮರೆತ ದೀರ್ಘಕಾಲಿಕ ಜೀವನವನ್ನು , ಆಧುನಿಕ ತಂತ್ರಗಾರಿಕೆಯ ಉಪಕರಣಗಳ ಬಳಕೆಗಳನ್ನು ಅನಿವಾರ್ಯವಾಗಿ ಖರೀದಿ ಮಾಡಿದಂತೆ ಪಡೆದು ಆರೋಗ್ಯ ಹಾಳು ಮಾಡಿ ಮುಗಿದ ಆಯುಸ್ಸಿನೊಂದಿಗೆ ಅನಾಮಿಕನಾಗಿ ಬದುಕಬೇಕಾದ ಸ್ಥಿತಿ ವಿದೇಶದಲ್ಲಿ ಬದುಕುತಿರುವ ನಮ್ಮವರದು.


ಇವೆಲ್ಲದರ ಮದ್ಯೆ ಇತ್ತೀಚೆಗೆ ನಡೆಯುತ್ತಿರುವ ಯುದ್ಧ ಭೀತಿ ಕೇಳಿದಾಗಲೇ ಮೈ ರೋಮಾಂಚನವಾಗುತ್ತದೆ. ಪಶ್ಚಿಮ ದೇಶಗಳ ಜೀವನ ಶೈಲಿ, ಗ್ಯಾಸ್ಟ್ರಬಲ್, ಯೂರಿಕ್ ಆಸಿಡ್ ಸಮಸ್ಯೆ, ಮತ್ತೆ ನಿಯಮಿತ ಆಹಾರ ಪದ್ಧತಿಯಿಲ್ಲದೇ ಆಗುವ ಸಮಸ್ಯೆಗಳನ್ನೂ ತಂದೊಡ್ಡಿದೆ. ವಿದೇಶದ ಆದಾಯ ದೇಶಿಯ, ರಾಷ್ಟ್ರೀಯ ವರಮಾನಗಳ ಮೇಲೆ, ದೊಡ್ಡ ಕೊಡುಗೆ ಇದೆ ಎನ್ನುವುದು, ವಿದೇಶಿ ವ್ಯಾಪಾರ ಲಾಭದ ಮೇಲೆ ಸಪರಿಣಾಮ ಬೀರಿದೆಯಾದರೂ, ವಿದೇಶದಲ್ಲಿ ಸಂಪಾದಿಸುವವರ ಹಾಗೂ ಅವರ ಆಶ್ರಿತ ಜನರ ಐಷರಾಮದ ಬದುಕು ಬಾಲರಿಂದ ಮುದುಕರ ವರೆಗೂ ಸೋಮಾರಿತನ, ಅನಾರೋಗ್ಯ,ಅಹಿತಕರ ಚಟುವಟಿಕೆಗಳನ್ನು ಬಳುವಳಿಯಾಗಿ ನೀಡಲ್ಪಟ್ಟಿದೆ ಎಂದರೂ ತಪ್ಪಿಲ್ಲ. ಕೃಷಿ ಬದುಕು ಸುಧಾರಿಸಬಹುದೇ? ಮತ್ತೆ ಸತ್ವಯುತ ಅವಿಭಕ್ತ ಜೀವನ ಶೈಲಿ ಮತ್ತೆ ಕಾಣಬಹುದೇ ಎಂಬ ಕಾತರವಿದೆ.


🖊️ರಾಧಾಕೃಷ್ಣ ಎರುಂಬು.

- Advertisement -

Related news

error: Content is protected !!