ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ನವದೆಹಲಿ: ಭಾರತೀಯ ವಾಯುಪಡೆಗೆ ನಾಳೆ ಮತ್ತೊಂದು ಪ್ರಬಲ ಅಸ್ತ್ರ ಸೇರ್ಪಡೆಯಾಗಲಿದೆ. ಭಾರತಕ್ಕೆ ಮೊದಲ ಬ್ಯಾಚ್ ನ 5 ಡಸಾಲ್ಟ್ ರಫೇಲ್ ಯುದ್ಧ ವಿಮಾನ ನಾಳೆ ಬರಲಿವೆ. ಅಂಬಾಲಾ ವಾಯುಪಡೆ ನಿಲ್ದಾಣಕ್ಕೆ ಈ ಡಸಾಲ್ಟ್ ರಫೇಲ್ ಬಂದಿಳಿಯಲಿದ್ದು, ವಾಯುಪಡೆ ಬಲ ಮತ್ತಷ್ಟು ಹೆಚ್ಚಳವಾಗಲಿದೆ.
ಡಸಾಲ್ಟ್ ರಫೇಲ್-ಚಿಂಗ್ಡೆ ಜೆ-20 ಹೋಲಿಕೆ ಮಾಡಿದ ಚೀನಾ:
ಇತ್ತ ಡಸಾಲ್ಟ್ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ರಫೇಲ್ ಗೆ ಚೀನಾದ ಚಿಂಗ್ಡೆ ಜೆ.20 ಯುದ್ಧ ವಿಮಾನಗಳನ್ನು ಹೋಲಿಕೆ ಮಾಡಿ ಯಾವುದರ ಸಾಮರ್ಥ್ಯ ಹೆಚ್ಚು ಎಂದು ನೋಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪಾಕ್ ನ ಎಫ್-16, ಚೀನಾದ ಜೆ-20 ವಿಮಾನಗಳ ಬೆವರಿಳಿಸಬಲ್ಲ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.
2016ರಲ್ಲಿ ಒಪ್ಪಂದ ಮಾಡಿಕೊಂಡಿದ್ದ ಭಾರತ:
ಅತ್ಯಾಧುನಿಕ ಈ ಯುದ್ಧ ವಿಮಾನವನ್ನು ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಅಭಿವೃದ್ಧಿಪಡಿಸಿದೆ. 13 ವರ್ಷಗಳ ಹಿಂದೆ ಇಂಡಿಯನ್ ಏರ್ ಫೋರ್ಸ್ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳ ಖರೀದಿಗೆ ಟೆಂಡರ್ ಕರೆದಿತ್ತು. ಆಗ ಲಾಕ್ ಹೀಡ್ ಮಾರ್ಟಿನ್, ಡಸಾಲ್ಟ್ ಸೇರಿದಂತೆ ವಿವಿಧ ಜಾಗತಿಕ ಯುದ್ಧ ವಿಮಾನ ತಯಾರಿಕ ಕಂಪನಿಗಳು ಮುಂದೆ ಬಂದಿದ್ದವು. ನಂತರ 2012ರಲ್ಲಿ ರಫೇಲ್ ಖರೀದಿಗೆ ಭಾರತ ಒಪ್ಪಿಗೆ ಕೊಟ್ಟಿತ್ತು. ಆದರೆ ದರದ ವಿಚಾರದಲ್ಲಿ ಗೊಂದಲ ಉಂಟಾಗಿ ಖರೀದಿ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು. ನಂತರ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಫ್ರಾನ್ಸ್ ನೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿತ್ತು. ಇದರ ಪ್ರಕಾರ 36 ಯುದ್ಧ ವಿಮಾನಗಳ ಖರೀದಿಗೆ ಭಾರತದ ಸಹಿ ಹಾಕಿತ್ತು. ಈ ಹಿನ್ನಲೆಯಲ್ಲಿ ನಾಳೆ 5 ಡಸಾಲ್ಟ್ ರಫೇಲ್ ಯುದ್ಧ ವಿಮಾನಗಳು ಭಾರತ ಪ್ರವೇಶಿಸಲಿದ್ದು, ವಾಯುಪಡೆ ಬಲ ಮತ್ತಷ್ಟು ಹೆಚ್ಚಳವಾಗಲಿವೆ.