


ರಾಯಚೂರು: ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಕೆಳಗೆ ಬಿದ್ದ ಯುವಕನ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಸ್ಟೇಷನ್ ರಸ್ತೆಯಲ್ಲಿ ಶನಿವಾರ(ಫೆ.28) ಸಂಭವಿಸಿದೆ.
ಬಸವರಾಜ್ ಅರಕೇರಾ (21) ಮೃತಪಟ್ಟ ಯುವಕ. ಮೃತ ಬಸವರಾಜ್ ಬಿಎಸ್‌ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದರು ಮತ್ತು ಬಡತನದ ಕಾರಣದಿಂದ ಬಿಡುವಿನ ಸಮಯದಲ್ಲಿ ಕೇಟರಿಂಗ್ ಕೆಲಸ ಮಾಡುತ್ತಿದ್ದರು.ಬಸವರಾಜ್ ತನ್ನ ಸ್ನೇಹಿತರೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ, ಚಾಲಕನು ರಸ್ತೆಯಲ್ಲಿ ನಿಂತಿದ್ದ ಮತ್ತೊಂದು ಆಟೋವನ್ನು ತಪ್ಪಿಸಲು ಅತಿವೇಗವಾಗಿ ಆಟೋವನ್ನು ತಿರುಗಿಸಿದ್ದಾನೆ. ಈ ಹಠಾತ್ ತಿರುವಿನಿಂದಾಗಿ ನಿಯಂತ್ರಣ ತಪ್ಪಿದ ಬಸವರಾಜ್ ಆಟೋದಿಂದ ಕೆಳಕ್ಕೆ ಬಿದ್ದಿದ್ದಾರೆ. ಅದೇ ಕ್ಷಣದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಬಸವರಾಜ್ ಕುಟುಂಬಸ್ಥರು ಬಸ್ ಚಾಲಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಪಘಾತ ಸಂಬಂಧ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








