Monday, April 29, 2024
spot_imgspot_img
spot_imgspot_img

ಅಯೋಧ್ಯೆಯ ರಾಮನಿಗೆ ಕರಾವಳಿಯಲ್ಲಿ ಸಿದ್ಧವಾಗುತ್ತಿದೆ ರಥ!

- Advertisement -G L Acharya panikkar
- Advertisement -

ಕುಂದಾಪುರ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ. ಇಂತಹ ರಾಮನಿಗೀಗ ಕರಾವಳಿಯಲ್ಲಿ ರಥ ಸಿದ್ದಗೊಳ್ಳಲಿದ್ದು, ಕೋಟೇಶ್ವರದ ಶಿಲ್ಪಿಗಳಿಂದಲೇ ರಾಮರಥ ನಿರ್ಮಾಣಗೊಳ್ಳಲಿದೆ.

ರಥನಿರ್ಮಾಣಕ್ಕೆ ಕೋಟೇಶ್ವರದ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರು ಬಹು ಪ್ರಖ್ಯಾತಿ. ಕೋಟೇಶ್ವರದಲ್ಲಿ 1960ರಲ್ಲಿ ಆರಂಭಗೊಂಡಿರುವ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಲಕ್ಷ್ಮೀನಾರಾಯಣ ಆಚಾರ್ಯ, ಸಹೋದರ ಶಂಕರ ಆಚಾರ್ಯ ಮತ್ತು ಪುತ್ರ ರಾಜಗೋಪಾಲ ಆಚಾರ್ಯ ಅವರ ನೇತೃತ್ವದ ತಂಡ ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸಹಿತ ವಿವಿಧ ದೇವಾಲಯಗಳಿಗೆ ಚಿನ್ನ, ಬೆಳ್ಳಿ ಮತ್ತು ಮರದಿಂದ 127 ರಥಗಳನ್ನು ನಿರ್ಮಿಸಿಕೊಟ್ಟ ಅನುಭವಹೊಂದಿದ್ದಾರೆ. 27ಕ್ಕೂ ಅಧಿಕ ಬ್ರಹ್ಮರಥ, 1 ಇಂದ್ರರಥ, 1 ಚಂದ್ರರಥ, 2 ಚಿನ್ನದ ರಥ, 8 ಬೆಳ್ಳಿಯ ರಥ, 63 ಪುಷ್ಪರಥವನ್ನು ಈಗಾಗಲೇ ನಿರ್ಮಾಣ ಮಾಡಿದ್ದಾರೆ. ಮಾತ್ರವಲ್ಲ ರಥ ನಿರ್ಮಾಣದ ಸಾಧನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ಇದೀಗ ಅಯೋಧ್ಯೆಯ ರಾಮನ ರಥವೂ ಕೂಡ ಕೋಟೇಶ್ವರದ ಶಿಲ್ಪಿಗಳಿಂದಲೇ ನಿರ್ಮಾಣವಾಗಲಿದೆ. ಸ್ವರಾಜ್ಯ ಅಂಕಣಕಾರ್ತಿ ಶಿಫಾಲಿ ವೈದ್ಯ ಅವರು ಪುರಾತನ ದೇವಸ್ಥಾನಗಳ ರಥಶಿಲ್ಪ ವಿಧಾನ ವೀಕ್ಷಿಸಲು ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದರು. ಅಲ್ಲದೇ ತಮ್ಮ ಟ್ವೀಟರ್ ನಲ್ಲಿ ಅಯೋಧ್ಯೆಯ ರಾಮ ಮಂದಿರದ ರಥ ನಿರ್ಮಾಣದ ಜವಾಬ್ದಾರಿಯನ್ನು ಕೋಟೇಶ್ವರದ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ ವಹಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವುದೊಂದೆ ಬಾಕಿ.

ಇನ್ನು ಅಯೋಧ್ಯೆ ರಾಮಮಂದಿರಕ್ಕೆ ರಥ ನಿರ್ಮಿಸುವ ಬಗ್ಗೆ ಕಳೆದ ಮಾರ್ಚ್‌ನಲ್ಲೇ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ರಥ ನಿರ್ಮಾಣದ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಮಠಾಧೀಶರೊಬ್ಬರು ಕೋಟೇಶ್ವರದ ರಥಶಿಲ್ಪಿಗಳನ್ನು ಸೂಚಿಸಿದ್ದಾರೆ. ಅಲ್ಲದೇ ಅಯೋಧ್ಯೆಗೂ ಉಡುಪಿಗೂ ಅವಿನಾಭ ಸಂಬಂಧವಿರುವುದರಿಂದಾಗಿ ಉಡುಪಿಯ ರಥದ ಮಾದರಿಯಲ್ಲಿಯೇ ನೂತನ ರಥ ನಿರ್ಮಾಣದ ಕಾರ್ಯ ನಡೆಯಲಿದೆ.

ಅಯೋಧ್ಯೆಯ ರಾಮನಿಗೆ ಕೋಟೇಶ್ವರದಲ್ಲಿ ರಥ ನಿರ್ಮಾಣವಾಗಲಿದೆಯೇ? ಅಥವಾ ಅಯೋಧ್ಯೆಯಲ್ಲಿಯೇ ರಥ ಸಿದ್ದವಾಗುತ್ತಾ ಅನ್ನೋ ಬಗ್ಗೆ ಇನ್ನು ಖಚಿತವಾಗಿಲ್ಲ. ಒಂದೆಡೆ ಪೇಜಾವರ ಸ್ವಾಮೀಜಿಗಳು ಕಂಡಿದ್ದ ರಾಮಮಂದಿರ ನಿರ್ಮಾಣದ ಕನಸು ನಿರ್ಮಾಣವಾಗುತ್ತಿದ್ರೆ, ಇನ್ನೊಂದೆಡೆ ರಾಮನಿಗೆ ಕರಾವಳಿಯ ಶಿಲ್ಪಿಗಳಿಂದಲೇ ರಥ ನಿರ್ಮಾಣವಾಗುತ್ತಿರೋದು ಕರಾವಳಿಗರ ಸಾಧನೆಗೆ ಮತ್ತೊಂದು ಹೆಮ್ಮೆಯ ಗರಿ.

- Advertisement -

Related news

error: Content is protected !!