ಲಕ್ನೋ: ನಾಳೆ ಐತಿಹಾಸಿಕ ಕ್ಷಣಕ್ಕೆ ಪೌರಾಣಿಕ ನಗರಿ ಅಯೋಧ್ಯೆ ಸಾಕ್ಷಿಯಾಗಲಿದೆ. ಕಾತುರದಿಂದ ಕಾಯುತ್ತಿರುವ ಭಾರತೀಯರ ಕನಸು ನಾಳೆ ನನಸಾಗಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದ್ದು, ಭರದಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಕೊರೊನಾ ಸಾಂಕ್ರಾಮಿಕ ಭೀತಿ ಹಿನ್ನಲೆಯಲ್ಲಿ ಒಟ್ಟು 175 ಅತಿಥಿಗಳು ನಾಳಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಯೋಧ್ಯೆಯಲ್ಲಿ ತಯಾರಿ ಹೇಗಿದೆ..?
ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಶುಭ ಸಮಾರಂಭಕ್ಕೆ ಮಳೆ ಅಡ್ಡಿಯಾಗದಂತೆ ಭೂಮಿಪೂಜೆಯ ಸ್ಥಳದಲ್ಲಿ ಟೆಂಟ್ ನಿರ್ಮಿಸಲಾಗಿದೆ.
ಮುಚ್ಚಿದ ವಲಯದ ಒಂದು ಭಾಗವನ್ನು ಭೂಮಿ ಪೂಜೆಗೆಂದು 400 ಅಡಿ ಚದರ ಮೀಸಲಿಡಲಾಗಿದೆ. ಈ ಚದರ ಪ್ರದೇಶವನ್ನು 9 ಧ್ರುವಗಳಿಂದ ಗುರುತಿಸಲಾಗಿದೆ. ಅದರ ಮೇಲೆ ಪ್ರಕಾಶಮಾನವಾದ ಕೇಸರಿ ಬಟ್ಟೆಯನ್ನು ಹೊಂದಿರುವ ಟೆಂಟ್ ನಿರ್ಮಿಸಲಾಗಿದೆ.
ಸರಿಯಾದ ಸಾಮಾಜಿಕ ಅಂತರ ಪ್ರೋಟೋಕಾಲ್ಗಳನ್ನು ಅನುಸರಿಸಿ 175 ಆಹ್ವಾನಿತರು ಮತ್ತು ಪೋಷಕ ಸಿಬ್ಬಂದಿಗೆ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಪೆಂಡಲ್ ಉದ್ದಕ್ಕೂ, ಎಲ್ ಸಿ ಡಿ ಪರದೆಗಳನ್ನು ಹಾಕಲಾಗಿದೆ.
ಮಧ್ಯಾಹ್ನದ ವೇಳೆಗೆ ಅಯೋಧ್ಯೆ ತಲುಪಲಿರುವ ಪ್ರಧಾನಿ ಮೋದಿ:
ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಮಧ್ಯಾಹ್ನದ ವೇಳೆಗೆ ಅಯೋಧ್ಯೆಯನ್ನು ತಲುಪಲಿದ್ದಾರೆ .ಮೊದಲು ಹನುಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ಅವರು ಭೂಮಿ ಪೂಜೆಗೆ ರಾಮ ಜನ್ಮಭೂಮಿ ತಾಣಕ್ಕೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಸುಮಾರು ಒಂದೂವರೆ ಗಂಟೆಗಳ ಕಾಲ ಆಚರಣೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸೆಲ್ಫಿ ನಿಷೇಧ, ಸಾಮಾಜಿಕ ಅಂತರ ಕಡ್ಡಾಯ:
ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಸಿಬ್ಬಂದಿಗೆ ಗಣ್ಯರ ಜತೆ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಹೀಗಾಗಿ 8 ಅಡಿ ದೂರ ಸಾಮಾಜಿಕ ಅಂತರ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ನಡುವೆ ಸುರಕ್ಷಿತ ರೀತಿಯಲ್ಲಿ ಕಾರ್ಯಕ್ರಮ ನಡೆಸುವುದು ಯುಪಿ ಸರ್ಕಾರಕ್ಕೆ ಸವಾಲಾಗಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಎಲ್ಲ ರೀತಿಯ ಸುರಕ್ಷತೆ ಹಾಗೂ ಭದ್ರತಾ ಸಿದ್ಧತೆ ಮಾಡಲಾಗುತ್ತಿದೆ. ಹೆಚ್ಚಿನ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನಾವು 8 ಅಡಿ ದೂರದಲ್ಲಿ ಕುರ್ಚಿಯನ್ನು ಇಡುತ್ತೇವೆ ಎಂದು ಅಯೋಧ್ಯೆ ಜಿಲ್ಲಾಧಿಕಾರಿ ಅನುಜ್ ಕುಮಾರ್ ತಿಳಿಸಿದ್ದಾರೆ.
ಪ್ರಮುಖ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳ ನಿಯೋಜನೆ:
ನಾಳೆ ಅಯೋಧ್ಯೆಯ ಮುಖ್ಯ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳನ್ನು ನಿಯೋಜನೆಗೊಳಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಹೆಲಿಪ್ಯಾಡ್, ಹನುಮನ ದೇವಸ್ಥಾನ, ರಾಮಜನ್ಮಭೂಮಿ ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ಇನ್ನು ಕರ್ತವ್ಯದ ಸಮಯದಲ್ಲಿ ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಸಿಬ್ಬಂದಿಗೆ ತ್ರಿಬಲ್ ಲೇಯರ್ಡ್ ಮಾಸ್ಕ್:
ಕೊರೊನಾ ಸೋಂಕು ಹರಡದಂತೆ ಶಿಲಾನ್ಯಾಸ ಸಮಾರಂಭ ನಡೆಯುವ ಆವರಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ತ್ರಿಬಲ್ ಲೇಯರ್ಡ್ ಮಾಸ್ಕ್ ವಿತರಿಸಲಾಗಿದೆ. ಮೇಲ್ವಿಚರಣೆಗಾಗಿ 2 ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಐತಿಹಾಸಿಕ ಸಂಭ್ರಮಕ್ಕೆ ನಾಳೆ ಅಯೋಧ್ಯೆ ಸಾಕ್ಷಿಯಾಗಲಿದ್ದು, ರಾಮಮಂದಿರ ನಿರ್ಮಾಣಕ್ಕೆ ನಡೆಯುತ್ತಿರುವ ಶಿಲಾನ್ಯಾಸ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಮಂದಿ ಕಾಯುತ್ತಿದ್ದಾರೆ.