Saturday, April 20, 2024
spot_imgspot_img
spot_imgspot_img

ಶ್ರೇಷ್ಠಸೇವೆ ರಂಗಪೂಜೆಯಿಂದ ಸರ್ವ ಪಾಪ ಪರಿಹಾರ

- Advertisement -G L Acharya panikkar
- Advertisement -

“ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ….
ಕುಳಿತು ಕೇಳಲು ನಿಲುವ…..
ನಿಂತರೆ ನಲಿವ……..
ನಲಿದರೆ ಒಲಿವ ನಾ ನಿಮಗೆಂಬ…
ಸುಲಭನೋ ಹರಿ ತನ್ನವರನು
ಅರೆಗಳಿಗೆ ಬಿಟ್ಟದಲನೋ….
ರಮಾಧವನ ಒಲಿಸಲರಿಯದೆ…
ಪಾಮರರು ಬಳಲುವರು ಭವದೊಳಗೆ…

ಎಂಬ ಪುರಂದರ ದಾಸರ ಕೀರ್ತನೆ ಯಲ್ಲಿನ ಆರಂಭದ ಉಗಾಭೋಗ ನಾವೆಲ್ಲ ಕಿವಿಯಾರೆ ಕೇಳಿದ್ದೇವೆ. ಇಲ್ಲಿ ಸ್ಪಷ್ಟವಾಗಿದೆ,ನಲಿದು ಹಾಡಿದರೆ ಭಗವಂತ ಒಲಿದು ಬರುವನೆಂದು. ಭಜನೆ ವಿಭಜನೆಯನ್ನು ದೂರಿಕರಿಸುವುದೆಂದು ಜೊತೆಯಾಗಿ ಕುಳಿತು,ನಲಿದು ಭಗವಂತನ ಸ್ತುತಿಸಿ ಹಾಡಿ ಹೋಗಳುವುದರಿಂದ ಮನದ ತ್ರಾಸ ನೀಗುವುದು, ಮನಸಿಗೆ ಆನಂದ ದೊರೆಯುವುದು. ಭಗವಂತನ ಅನುಗ್ರಹ ಭಜಕರಿಗೂ, ಕೇಳುಗರಿಗೂ ಸಿಗುವುದು.

ಹೀಗೊಂದು ಕುಣಿತ ಭಜನೆ ಕಾರ್ಯಕ್ರಮ ನಡೆದಿರುವುದು ನಿನ್ನೆ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದ ಸಭಾಭವನದಲ್ಲಿ ಊರ ಪುಟಾಣಿಗಳಿಂದ. ಉತ್ತಮ ತಯಾರಿ ನಿರ್ದೇಶನ, ಪೋಷಕರ ಪ್ರೋತ್ಸಾಹದಿಂದ ಒಟ್ಟಲ್ಲಿ ಪ್ರಶಂಸಿಸಲ್ಪಟ್ಟಿತ್ತು.

ರಂಗ ಪೂಜೆ ವಿಶಿಷ್ಟ ಸೇವೆ

“ಸೇವೆಯೆಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವ ” ಹೀಗೆಂದು ಹಾಡುತ್ತೇವೆ. ಸೇವೆಯಲ್ಲಿ ಹಲವು ರೀತಿ.ಅಲ್ಲಿ ಭಗವಂತನ ಸೇವೆ ಉನ್ನತವಾದುದು.ಸುಲಭವಾಗಿ ಭಗವತ್ ಪ್ರಿಯವಾದ ಸೇವೆಗೆ ಹಲವು ದಾರಿಗಳು. ಎಲ್ಲವೂ ಸೇವಕನ ನಿಲುವಿಗೆ ನಿಲುಕಿದ್ದು. ಅದರಲ್ಲೊಂದು ವೈದಿಕರ ಮೂಲಕ ಭಗವಂತನಿಗೆ ಸಲ್ಲಿಸುವ ಪೂಜಾ ಸೇವೆ. ಅರ್ಚನೆಯೋಪಾದಿಯಲ್ಲಿ ಅರ್ಚಕರು ಹೇಳುವ ಪ್ರಕಾರ ದೇವನಿಗೆ ಸಾಮಿಪ್ಯ ಪಡೆದ ಸೇವೆ ರಂಗ ಪೂಜೆ.’ಶೈವೋತ್ಸವ’ ಎಂದು ಕರೆಯಲ್ಪಡುವ ಉನ್ನತ ಸೇವೆಯನ್ನು ಹಲಗೆಗಳಿಂದ ರಂಗವನ್ನು ನಿರ್ಮಿಸಿ ಪೂಜಾದಿ ಕಾರ್ಯಗಳನ್ನು ಮಾಡುವುದರಿಂದ ‘ರಂಗಪೂಜೆ’ ಎಂದು ಕರೆಯಲ್ಪಟ್ಟಿತ್ತು ಎಂಬುದು ರೂಢಿಯಲ್ಲಿನ ಮಾತು.

ಹೆಚ್ಚಾಗಿ ದೇವಾಲಯಗಳಲ್ಲಿ ನಡೆಯುವ ಈ ಸೇವೆಯಲ್ಲಿ ದ್ರವ್ಯಕಲಶ ಕಲಶಾಧಿವಾಸ ವೈಧಿಕ ಕಾರ್ಯಗಳು ನಡೆದು, ಸಾಮಾನ್ಯವಾಗಿ ದೇವದ್ವಾರದಿಂದ ಧ್ವಜಸ್ಟಂಬದ ವರೆಗೂ ಹಲಗೆಗಳನ್ನು ಹಾಸಿ ಅದರ ಮೇಲೆ ಬಿಳಿ ವಸ್ತ್ರವನ್ನು ಹಾಕಿ (ಮಡಿವಾಳ ಸಮುದಾಯದವರು ಬಟ್ಟೆ ತಂದು ಹಾಕುವ ತೆಗೆಯುವ ಕೆಲಸ ಮಾಡುವುದು ಕ್ರಮ) ರಂಗ ನಿರ್ಮಿಸುತ್ತಾರೆ. ಅದರ ಮೇಲೆ ಕುಡಿಬಾಳೆ ಎಲೆಗಳನ್ನು ಹಾಕಿ (ಹರಿವಾಣ ಬಳಸುತ್ತಾರೆ )ಅದಕ್ಕೆ ಅನ್ನ ಅಥವಾ ಅವಲಕ್ಕಿ ಪಂಚಕಜ್ಜಾಯ ಅಥವಾ ಅವಲಕ್ಕಿ ನೈವೇದ್ಯ ಹಾಕಿ, ಬಾಳೆಹಣ್ಣು, ತೆಂಗಿನ ಕಾಯಿ ಎರಡು ಹೋಳಾಗಿಸಿ (ಗಡಿ ) ಒಂದು ಹೋಳನ್ನು ಮದ್ಯದಲ್ಲಿಟ್ಟು ಸುತ್ತಲೂ ಬಾಳೆಹಣ್ಣು, ಬೆಲ್ಲ, ಅಪ್ಪ, ವೀಳ್ಯದೆಲೆ ಮೊದಲಾದ ವಸ್ತುಗಳಿಂದ ಪ್ರತಿ ಕುಡಿಎಲೆಯನ್ನು ಶೃಂಗರಿಸುತ್ತಾರೆ.ಎಲೆಯ ಮದ್ಯದಲ್ಲಿರಿಸಿದ ತೆಂಗಿನ ಗಡಿಯಲ್ಲಿ ತುಪ್ಪ ಹಾಕಿ ಅಣಿಯಾಗಿಸಿ ಪೂಜಾ ಸಮಯದಲ್ಲಿ ದೀಪ ಉರಿಸುತ್ತಾರೆ.

ಸಿಂಗರಿಸಿದ ಪ್ರತಿ ಕುಡಿ ಎಲೆಗಳನ್ನು ಘ್ರತಾಭಿಗಾರ ಅಥವಾ ಪಡೆಗಳು ಎನ್ನುತ್ತಾರೆ. ಹಾಸಿದ ಹಲಗೆ ಮತ್ತು ಸಿಂಗರಿಸಿದ ಪಡೆಗಳ ಎರಡೂ ಪಾರ್ಶ್ವದಲ್ಲಿ ದೀಪದದಳಿ ಗಳನ್ನು (3 ಯಾ 5 ಅಂತರದ ದೀಪದ ಸಾಲು )ಇರಿಸಿ ಎದುರು ಭಾಗಕ್ಕೆ ವಸ್ತ್ರವನ್ನು ಇಳಿಸಿ ಬಿಡುತ್ತಾರೆ. ಈ ಪಡೆಗಳ ಸಂಖ್ಯೆಯಲ್ಲಿ ದೇವಾಲಯದ ದೇವರಿಗೆ ಹೊಂದಿಕೊಂಡಂತೆ ಮತ್ತು ಅನುಕೂಲತೆ ಇದ್ದಂತೆ ವ್ಯತ್ಯಾಸಗಳನ್ನು ಮಾಡುತ್ತಾರೆ. ಗಣಪತಿಗೆ 21, ವಿಷ್ಣುವಿಗೆ 24, ಹೀಗೆ. ದೇವರ ವಿಗ್ರಹವನ್ನು ಶೃಂಗರಿಸಿ,ಮಹಾ ಮಂಗಳಾರತಿ ಸಮಯಕ್ಕೆ, ಹಾಕಿರುವ ಎದುರು ಭಾಗದ ವಸ್ತ್ರ ಸರಿಸಿ, ದೀಪರಾಧನೆ, ಪೂಜಾ ಕ್ರಿಯಾದಿಗಳನ್ನು ಮಾಡಿ ಈ ಎಲ್ಲಾ ಪಡೆಗಳನ್ನು ನೈವೇದ್ಯವೆಂಬಂತೆ ಸಕಲ ದೇವ ಪರಿವಾರಗಳಿಗೆ ಸಮರ್ಪಸಿ, ಅಕ್ಷತೆಯೊಂದಿಗೆ ಪ್ರಾರ್ಥಿಸುತ್ತಾರೆ.

ದೇವರ ತೀರ್ಥ ಪ್ರಸಾದ ನೀಡಿ, ಸೇವೆಯನ್ನು ಮಾಡಿಸಿದವರಿಗೆ, ದೇವಾಲಯದ ಗುರಿಕಾರ ವರ್ಗಕ್ಕೆ ಈ ಪಡೆಗಳನ್ನು ಪ್ರಸಾದ ರೂಪವಾಗಿ ನೀಡುತ್ತಾರೆ.ರಂಗಪೂಜೆಯಲ್ಲಿ ಕಿರು ರಂಗಪೂಜೆ,ಸಣ್ಣರಂಗಪೂಜೆ, ಮಧ್ಯಮ,ಹಾಗೂ ದೊಡ್ಡರಂಗಪೂಜೆ ಎಂಬುದಾಗಿ ಪಡೆಸಂಖ್ಯೆಯ ಆಧಾರದಲ್ಲಿ ವಿವಿಧತೆ ಇದೆ.ಕೆಲವು ದೇವಸ್ಥಾನದಲ್ಲಿ ರಂಗಪೂಜೆಯ ವಿಶೇಷ ಸುತ್ತುಬಲಿ ನಡೆಯುವುದಿದೆ. ಸೇವೆಯ ಪೂರ್ಣತೆಗೆ ಫಲಾಹಾರ, ಅನ್ನಸಂತರ್ಪಣೆಯು ನಡೆಯುತ್ತದೆ. ಸರ್ವ ಪಾಪ ಪರಿಹಾರ ಪೂಜೆ ಎಂದೇ ಪ್ರಸಿದ್ಧವಾಗಿರುವ ಒಂದು ರಂಗ ಪೂಜೆಯು ನೂರು ಕಂಬಳ ನೋಡಿದ ಪಾಪಕ್ಕೆ ಪರಿಹಾರ ಎನ್ನುವ ಮಾತು ಕೇಳಿ ಬರುತ್ತದೆ. ಹೀಗೆ ವಿಧಿವತ್ತಾಗಿ ರಂಗಪೂಜೆ ಸೇವೆಯಿಂದ ಐಶ್ವರ್ಯ, ಆರೋಗ್ಯ, ಸಂಪತ್ತು, ಪತ್ನಿ,ಪುತ್ರಿ, ಪೌತ್ರಾದಿ, ಯಶಸ್ಸು ಕಂಡು, ಸಕಲ ಭೂತ ಪ್ರೇತಾದಿ ಉಪದ್ರವ,ದುಶ್ಚಟಗಳಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ.

ಇಂತಹ ವಿಶೇಷ ರಂಗಪೂಜೆ ಕಾರ್ಯಕ್ರಮವು ಎರುಂಬು ಶ್ರೀ ವಿಷ್ಣು ಮಂಗಲ ದೇವಸ್ಥಾನದಲ್ಲಿ ದಿನಾಂಕ 4.9.2021 ರಂದು ಅರ್ಚಕರಾದ ಶ್ರೀ ಬಾಲಕೃಷ್ಣ ಕಾರಂತರ ಪೌರೋಹಿತ್ಯದಲ್ಲಿ ನಡೆಯಿತು. ಊರ ಹತ್ತು ಸಮಸ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅಲಂಕಾರ ಪ್ರಿಯ ಶ್ರೀ ವಿಷ್ಣುಮಂಗಲನಿಗೆ ಮಾಡಿದ ಹೂವಿನ ಅಲಂಕಾರ ಕಣ್ಮನ ಸೆಳೆದಿತ್ತು.

ವಿವರ :- ರಾಧಾಕೃಷ್ಣ ‘ರಾಮ್ದೇವ್ ‘ವಿಟ್ಲ

- Advertisement -

Related news

error: Content is protected !!