Friday, July 24, 2026
spot_imgspot_img
spot_imgspot_img

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

- Advertisement -
- Advertisement -

ಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

ಆಶಾ ಭೋಸ್ಲೆ ಅವರಿಗೆ ಶನಿವಾರ ಹೃದಯಾಘಾತವಾಗಿದ್ದು, ಮುಂಬೈನ ಪ್ರತಿಷ್ಠಿತ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಅವರು ಇಂದು (ಏ.12) ಕೊನೆಯುಸಿರೆಳೆದಿದ್ದಾರೆ.

ಆಶಾ ಭೋಸ್ಲೆ ಅವರು ಭಾರತ ರತ್ನ ಪುರಸ್ಕೃತ ಖ್ಯಾತ ಗಾಯಕಿ ಲತಾ ಮಂಗೇಷ್ಕರ್ ಅವರ ಸಹೋದರಿ ಆಗಿದ್ದು, ಅಕ್ಕನಂತೆಯೇ ಅದ್ಭುತ ಗಾಯಕಿ ಆಗಿದ್ದಾರೆ. ಎಂಟು ದಶಕಗಳಿಂದಲೂ ಗಾಯಕ ಕ್ಷೇತ್ರದಲ್ಲಿರುವ ಆಶಾ ಭೋಸ್ಲೆ, ಈವರೆಗೆ ಸಾವಿರಾರು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಹಲವಾರು ಲೈವ್ ಶೋಗಳನ್ನು ನೀಡಿದ್ದಾರೆ. ಹಲವು ಸಿಂಗಿಂಗ್ ರಿಯಾಲಿಟಿ ಶೋಗಳಿಗೆ ಜಡ್ಜ್ ಸಹ ಆಗಿದ್ದರು. ಅವರು ತಮ್ಮ 90ನೇ ವಯಸ್ಸಿನಲ್ಲೂ ಸಹ ಲೈವ್ ಸಿಂಗಿಂಗ್ ಶೋಗಳನ್ನು ನೀಡುತ್ತಿದ್ದರು. ಮೂರು-ನಾಲ್ಕು ಗಂಟೆ ಸ್ಟೇಜ್ ಮೇಲೆ ನಿಂತು ಹಾಡುತ್ತಿದ್ದರು. ಆದರೆ ಕಳೆದ ಕೆಲ ತಿಂಗಳುಗಳಿಂದ ಅವರಿಗೆ ವಯೋಸಹಜ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ.

ಆಶಾ ಭೋಸ್ಲೆ ಅವರು ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಅಸ್ಸಾಮೀಸ್, ಭೋಜ್‌ಪುರಿ, ನೇಪಾಳಿ, ಬೆಂಗಾಲಿ ಇನ್ನೂ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಗಾಯನಕ್ಕೆ ಎರಡು ರಾಷ್ಟ್ರಪ್ರಶಸ್ತಿ ಸೇರಿದಂತೆ, ಏಷ್ಯಾ ನೈಟಿಂಗೇಲ್, ಲತಾ ಮಂಗೇಷ್ಕರ್ ಪ್ರಶಸ್ತಿ, ಹಲವಾರು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಶಾ ಅವರ ಹಾಡುಗಳು ಮೂರು ಬಾರಿ ಪ್ರತಿಷ್ಠಿತ ಗ್ರಾಮಿಗೆ ನಾಮಿನೇಟ್ ಸಹ ಆಗಿದ್ದವು.

ಆಶಾ ಭೋಸ್ಲೆ ಅವರು ಕನ್ನಡದಲ್ಲಿ ಮೂರು ಹಾಡುಗಳನ್ನು ಹಾಡಿದ್ದಾರೆ. 1967ರಲ್ಲಿ ಬಿಡುಗಡೆ ಆಗಿದ್ದ ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾನಲ್ಲಿ ‘ಏನೋ ಏನೋ’, 1973 ರಲ್ಲಿ ಬಿಡುಗಡೆ ಆದ ‘ದೂರದ ಬೆಟ್ಟ’ ಸಿನಿಮಾದ ‘ಸವಾಲು ಹಾಕಿ ಸೋಲಿಸಿ ಎಲ್ಲರ’, 2010 ರಲ್ಲಿ ‘ಮತ್ತೆ ಮುಂಗಾರು’ ಸಿನಿಮಾದ ‘ಹೇಳದೆ ಕಾರಣ’ ಹಾಡುಗಳನ್ನು ಆಶಾ ಭೋಸ್ಲೆ ಅವರು ಕನ್ನಡದಲ್ಲಿ ಹಾಡಿದ್ದಾರೆ. ಕರ್ನಾಟಕದಲ್ಲಿ ಸಾಕಷ್ಟು ಬಾರಿ ಲೈವ್ ಶೋಗಳನ್ನು ಸಹ ಅವರು ನೀಡಿದ್ದಾರೆ.

ಆಶಾ ಅವರು 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದವರಾಗಿದ್ದು, ಅತ್ಯಧಿಕ ರೆಕಾರ್ಡಿಂಗ್ ಹಾಡುಗಳ ಒಡತಿ ಎಂಬ ಗಿನ್ನಿಸ್ ದಾಖಲೆ ಬರೆದಿದ್ದಾರೆ.

- Advertisement -

Related news

error: Content is protected !!