Saturday, June 13, 2026
spot_imgspot_img
spot_imgspot_img

ಸಾಲೆತ್ತೂರು: ಶಿಥಿಲಾವಸ್ಥೆಯಲ್ಲಿರುವ ಮೂರು ದಶಕಗಳ ನೀರಿನ ಟ್ಯಾಂಕ್; ಕುಸಿದು ಬೀಳುವ ಭೀತಿಯಲ್ಲಿ ಬಡ ಕುಟುಂಬಗಳು..!

- Advertisement -
- Advertisement -

ಸಾಲೆತ್ತೂರು ಗ್ರಾಮ ಪಂಚಾಯತ್ ನಿರ್ಲಕ್ಷ್ಯ; ಕಂದಾಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ..!

ಮೂವತ್ತು ವರ್ಷ ಹಿಂದಿನ ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ಕುಸಿಯುವ ಹಂತದಲ್ಲಿದ್ದರೂ ಸಾಲೆತ್ತೂರು ಗ್ರಾಮ ಪಂ.ಪಿ.ಡಿ.ಒ.ಎಚ್ಚೆತ್ತುಕೊಳ್ಳದ ಕಾರಣ ಜನ ಭೀತಿಯಲ್ಲಿ ಬದುಕುವಂತಾಗಿದೆ.

ಇಲ್ಲಿನ ಪಾಲ್ತಾಜೆ ಹೊಸ ಕಾಲೋನಿಯಲ್ಲಿ ಮೂವತ್ತು ವರ್ಷಗಳ ಹಿಂದೆ ವಿಶ್ವಬ್ಯಾಂಕ್ ಯೋಜನೆಯಲ್ಲಿ ನಿರ್ಮಾಣವಾಗಿದ್ದ ಕುಡಿಯುವ ನೀರಿನ ಟ್ಯಾಂಕ್ ಇದೀಗ ಕುಸಿಯುವ ಹಂತದಲ್ಲಿದೆ. ಸುಮಾರು ನಲುವತ್ತು ಅಡಿ ಎತ್ತರದಲ್ಲಿರುವ ಟ್ಯಾಂಕಿನ ಆಧಾರ ಸ್ತಂಭಗಳು ಶಿಥಿಲಗೊಂಡು ಒಳಭಾಗದ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಅಸ್ತಿಪಂಜರದಂತೆ ಕಂಡು ಬರುತ್ತಿವೆ. ಮೇಲ್ಭಾಗದಲ್ಲಿ ನೀರು ಸೋರುತ್ತಿದೆ. ಟ್ಯಾಂಕಿಗೆ ಹತ್ತುವ ಕಾಂಕ್ರೀಟ್ ಕಂಬದ ಮೆಟ್ಟಿಲುಗಳು ಯಾವುದೇ ಕ್ಷಣ ನೆಲಕಚ್ಚುವ ಹಂತದಲ್ಲಿದೆ.

ಟ್ಯಾಂಕ್ ಪರಿಸರದಲ್ಲಿ ಕೇವಲ ಹದಿನೈದು ಅಡಿಗಳಷ್ಟು ದೂರದಲ್ಲಿ ಆರು ಬಡಕುಟುಂಬಗಳ ಮನೆಯಿದೆ. ಸ್ಥಳೀಯರು ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಸಾಲೆತ್ತೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಬರಹ ಮೂಲಕ ದೂರು ನೀಡಿದ್ದರೂ ಈವರೆಗೂ ಸ್ಪಂದಿಸಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ತಹಶೀಲ್ದಾರ್ ಶ್ರೀಮತಿ ಅರ್ಚನಾ ಭಟ್ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ತಕ್ಷಣವೇ ವಿಟ್ಲ ಹೋಬಳಿ ಕಂದಾಯ ನಿರೀಕ್ಷಕರಾದ ಎಂ.ಎನ್.ರವಿ, ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪ ತಮ್ಮ ಸಿಬ್ಬಂದಿಗಳ ಜೊತೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಆ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿ ವಿವರಣೆ ಕೇಳಿದ್ದಾರೆ. ಅಷ್ಟರಲ್ಲಿ ಸಾರ್, ನಾವು ಹಗಲು ಹೊತ್ತಿನಲ್ಲಿ ಮಾತ್ರ ಟ್ಯಾಂಕಿಗೆ ನೀರು ತುಂಬಿಸುತ್ತೇವೆ. ರಾತ್ರಿ ಸಮಯದಲ್ಲಿ ತುಂಬಿಸುವುದಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮೂವತ್ತು ವರ್ಷ ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಹಗಲು ಹೊತ್ತಲ್ಲಿ ಬೀಳುವುದಿಲ್ಲ. ರಾತ್ರಿ ಹೊತ್ತಲ್ಲಿ ಕುಸಿದು ಬೀಳುತ್ತೇನೆಂದು ಪಿ.ಡಿ.ಒ.ಗೆ ಭರವಸೆ ನೀಡಿದೆಯೇ ಎಂಬ ಸಂಶಯ ಮೂಡುವಂತಾಗಿದೆ. ಪಿ.ಡಿ.ಒ.ಅವರ ಉಡಾಫೆಯ ಉತ್ತರದಿಂದ ಆಕ್ರೋಶಗೊಂಡ ಕಂದಾಯ ಅಧಿಕಾರಿಗಳು ತಕ್ಷಣವೇ ವಾಟರ್ ಮ್ಯಾನ್ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಟ್ಯಾಂಕಿನಲ್ಲಿ ಶೇಖರಣೆಯಾಗಿದ್ದ ನೀರನ್ನು ಖಾಲಿ ಮಾಡಿಸಿ ಒತ್ತಡ ಕಡಿಮೆಗೊಳಿಸಿದ್ದಾರೆ. ಕಾಲೋನಿ ನಿವಾಸಿಗಳ ಪ್ರಾಣಕ್ಕೆ ಕಂಠಕವಾದ ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕನ್ನು ಹತ್ತು ದಿನಗಳೊಳಗೆ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.

- Advertisement -

Related news

error: Content is protected !!