Sunday, May 5, 2024
spot_imgspot_img
spot_imgspot_img

ಸಾರ್ಥಕ – ಜ್ಞಾಪಕ

- Advertisement -G L Acharya panikkar
- Advertisement -

ಲೇಖಕರು- ಮಲ್ಲಿಕಾ ಜೆ ರೈ ಪುತ್ತೂರು

ಬದುಕು ಹಾಗೇ ನೋಡ ನೋಡುವಷ್ಟರಲ್ಲಿ ಎಷ್ಟು ಬೇಗನೇ ಸರಿದುಹೋಗುತ್ತಿರುತ್ತದೆ. ಕಳೆದ ದಿನಗಳು ಕಾಲಗರ್ಭದಲ್ಲಿ ಸೇರಿಹೋಗುತ್ತವೆ. ಬದುಕಿನ ಹೆಜ್ಜೆಯ ಗುರುತುಗಳು ನೆನಪಾಗಿ ಉಳಿದುಬಿಡುತ್ತವೆ.ನೆನಪಿನಾಳದ ಸುಳಿಯಲ್ಲಿ ಸುರುಳಿ ಸುತ್ತಿಕೊಂಡು ಯಾವಾಗ ಬೇಕು ಆವಾಗ ಮನನ ಮಾಡುವ ತಾಕತ್ತನ್ನು ದೇವರು ಮಾನವರಿಗೆ ದಯಪಾಲಿಸಿದ್ದಾನೆ. ಅದಕ್ಕಾಗಿ ಆತನಿಗೆ ಕೃತಜ್ಞತೆ ಅರ್ಪಿಸಲೇಬೇಕು.

ಬಾಳಿನ ಈ ದಾರಿಯಲ್ಲಿ ಒಂದೊಂದೇ ಹೆಜ್ಜೆಯಿರಿಸಿದರೂ ದಿನಕಳೆದಂತೆ ಆ ಹೆಜ್ಜೆಗಳು ದ್ವಿಗುಣಿತವಾಗಿ ಅಸಂಖ್ಯಾತ ಹೆಜ್ಜೆಗಳ ಸದ್ದೇ ಕಿವಿಯಲ್ಲಿ ರಿಂಗಣಿಸುತ್ತದೆ‌. ಆ ನೆನಪುಗಳನ್ನೇ ಒಮ್ಮೊಮ್ಮೆ ಅವಲೋಕನ ಮಾಡಿಕೊಂಡಾಗ ಅಲ್ಲಿಯೂ ಸುಖ – ದುಃಖ, ಕಷ್ಟ – ಸುಖ, ನೋವು – ನಲಿವುಗಳ ಸಮ್ಮಿಶ್ರಣಗಳ ಫಲಗಳು ಕಂಡುಬರುತ್ತವೆ. ನೋಡ ನೋಡುವಷ್ಟರಲ್ಲಿ ಬದುಕಿನ ಹೆಜ್ಜೆಗಳು ಸರಿದು ಹಿಂದೆ ತಿರುಗಿ ನೋಡಲಾಗದಷ್ಟು ಮುಂದೆ ಬಂದಿರುತ್ತೇವೆ.

ಹಿಂತಿರುಗಿ ನೋಡಿದಾಗ ನಾವು ನಡೆದ ದಾರಿ ಕುತೂಹಲವನ್ನು ಹುಟ್ಟಿಸುವುದು ಸಹಜ. ಅಬ್ಬ ಎಷ್ಟು ಬೇಗನೇ ಸಾಗಿಹೋಯ್ತಲ್ಲ ಅನ್ನುವ ಅಚ್ಚರಿಯೂ ಆಗುತ್ತದೆ. ದಾರಿಗಳು ಸಾವಿರವಿದ್ದರೂ ನಾವು ನಡೆಯಬೇಕಾದ ದಾರಿಯನ್ನು ಪರಮಾತ್ಮ ಮೊದಲೇ ನಿರ್ಧರಿಸಿರುತ್ತಾನೆ. ಅಂತೆಯೇ ನಮ್ಮ ಮನಸ್ಸನ್ನು ಅದಕ್ಕನುಗುಣವಾಗಿಯೇ ತಯಾರು ಮಾಡಿಸುತ್ತಾನೆ. ಇಂತಿಂಥ ದಾರಿಯಲ್ಲಿ ಸಾಗು, ನಿನಗೆ ಹಣ್ಣುಗಳಿರುವ ವೃಕ್ಷ ದೊರಕುತ್ತದೆ. ಅಥವಾ ಈ ದಾರಿಯಲ್ಲಿ ಹೋಗಬೇಡ ಅಲ್ಲಿ ತೊಂದರೆಯಿದೆ ಎಂದು ಅಂತರಾತ್ಮ ನಮ್ಮನ್ನು ಸದಾ ಎಚ್ಚರಿಸುತ್ತಿರುತ್ತದೆ. ಕೆಲವೊಮ್ಮೆ ನಮ್ಮದೇ ಹಠ ಗೆಲ್ಲಬೇಕೆಂಬ ಹುಚ್ಚು ಕುದುರೆಯನ್ನೇರಿಯೂ ಬದುಕು ಸಾಗಿಸುವುದೂ ಉಂಟು. ಹರಿತವಾದ ಅಲಗಿನ ಮೇಲೆ ನಡೆದಂತೆ!!.

ಏನೇ ಆದರೂ ಈ ಬದುಕೆಂಬುದು ನಿಂತ ನೀರಲ್ಲ. ಅದು ಚಲಿಸುತ್ತಿರುತ್ತದೆ. ನೀರು ಹರಿಯುತ್ತಾ ತನ್ನ ಸ್ವರೂಪವನ್ನು ಅಥವಾ ಪಾತ್ರವನ್ನು ಹಿರಿದಾಗಿಸುತ್ತಾ ಕೊನೆಗೆ ಸಾಗರವನ್ನು ಹೇಗೆ ಸೇರುತ್ತದೆಯೋ, ಮನುಷ್ಯರು ಕೂಡಾ ಹಲವು ಕಾರ್ಯಗಳಿಂದ ಪ್ರೇರಿತರಾಗಿ ಜೀವನವನ್ನು ಈ ಭೂಮಿಯಲ್ಲಿ ನಡೆಸಿ ಅಥವಾ ಜೀವಿಸಿ ಕೊನೆಗೆ ಅಂತರಾತ್ಮನೆಂಬ ಸಾಗರವನ್ನು ಸೇರುವುದೇ ಮಹದೋದ್ಧೇಶವಾಗಿದೆ.

ಬೆಟ್ಟವನ್ನು ಏರಬೇಕೆಂಬ ಕನಸು ಹೊತ್ತವನು ಅದರ ಬಗೆಯೇ ಒಂದಷ್ಟು ಆಲೋಚಿಸುತ್ತಾ ಇರುತ್ತಾನೆ. ಆಗಲೇ ಅದರ ಬಗೆಗೆ ಹೆಚ್ಚು ಆಸಕ್ತಿ ಬೆಳೆಯುತ್ತಾ ಹೋಗುತ್ತದೆ. ಇದರಿಂದಾಗಿ ಒಂದು ದಿನ ಆ ಬೆಟ್ಟವನ್ನು ಏರಿ ತನ್ನ ಕನಸನ್ನು ನನಸಾಗಿಸುತ್ತಾ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವಂತೆ, ಈ ಬದುಕಿನ ಬಾಳ ಬೆಟ್ಟವನ್ನೇರಲು ನಾವು ಸತತ ಕನಸು ಕಾಣುತ್ತ ಅದನ್ನು ಸಾಧನೆಯ ಪಥದೊಂದಿಗೆ ಏರುತ್ತಾ ನನಸು ಮಾಡಿಕೊಳ್ಳಬೇಕು. ಆಗ ಆ ಸಾಧಿಸುವ ಛಲ ಬಲಿತು ಸಿದ್ದಿಮಾರ್ಗದ ಕಡೆಗೆ ವಾಲುತ್ತದೆ. ನಿರಂತರ ಪ್ರಯತ್ನದಿಂದ. ಯಾವುದೇ ಘನ ಕಾರ್ಯಗಳು ಹೂವಿನ ಎಸಳಿನಂತೆ ಸಲೀಸಾಗಿ ಹಗುರವಾಗಿ ನೆರವೇರುವುದರಲ್ಲಿ ಯಾವ ಸಂಶಯವೂ ಇಲ್ಲ. ಆಗ ಹಿಂದೆ ತಿರುಗಿ ನೋಡಿದಾಗ ಮುಖದ ಕಿರುನಗೆ ಮಂದಹಾಸ ಮುಗುಳ್ನಗುವಾಗಿ ಯಾವತ್ತಿಗೂ ಬೆಳಕು ನೀಡಬಲ್ಲ ದೀಪದಂತೆ ದೇದೀಪ್ಯಮಾನವಾಗುತ್ತದೆ. ಜೀವನದ ಸಾಧನೆಯೆಂದರೆ ಬೇರೇನೂ ಅಲ್ಲ ನಡೆದ ದಾರಿಯ ಗುರುತು ಲೋಕದಲ್ಲಿ ಚಿರವಾಗುಳಿದರೆ ಅದಕ್ಕಿಂತ ಪರಮಾನಂದ ಬೇರಿಲ್ಲ. ಹುಟ್ಟಿದ ಮೇಲೆ ಇಟ್ಟ ಹೆಸರು ಅಜರಾಮರವಾಗಿ ಕಾಯ ಅಳಿದ ಮೇಲೂ ರಾರಾಜಿಸಿದರೆ ಹುಟ್ಟು ಸಾರ್ಥಕ, ಹೆಸರಿಟ್ಟವರೂ ಜ್ಞಾಪಕ.

ಲೇಖಕರು- ಮಲ್ಲಿಕಾ ಜೆ ರೈ ಪುತ್ತೂರು

- Advertisement -

Related news

error: Content is protected !!