



ಮಾಣಿ: ಮಾಣಿಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಮಾಣಿ, ಮಹಿಳಾ ಬಂಧುತ್ವ ವೇದಿಕೆ, ಚಿತ್ತಾರ ಮಹಿಳಾ ಮಂಡಳಿ (ರಿ) ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಕೌಶಲ್ಯ ಕೇಂದ್ರದ ಸಹಭಾಗಿತ್ವದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಪೂರ್ವಾಚರಣೆ ಕಾರ್ಯಕ್ರಮ ಇಂದು ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಜಯರಾಮ್ ಅವರು, ಸಾವಿತ್ರಿಬಾಯಿ ಫುಲೆ ಅವರ ಜೀವನ ಸಾಧನೆ, ಸಮಾಜ ಸುಧಾರಣೆಗೆ ನೀಡಿದ ಕೊಡುಗೆ ಹಾಗೂ ಮಹಿಳಾ ಶಿಕ್ಷಣದ ಮಹತ್ವದ ಕುರಿತು ಪ್ರೇರಣಾದಾಯಕವಾಗಿ ವಿವರಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಅವರು ಮಹಿಳಾ ಶಿಕ್ಷಣದ ಅಗತ್ಯತೆ ಹಾಗೂ ತಮ್ಮ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜ್ಯೋತಿರಾಜ್ ಅವರು ಸಂಸ್ಥೆಯಿಂದ ಮಹಿಳೆಯರಿಗೆ ನೀಡಲಾಗುವ ತರಬೇತಿ ಹಾಗೂ ಸ್ವಾವಲಂಬನಾ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾದ ರೋಷನ್ ಅವರು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿಂದ ಅಂತಿಮ ದಿನಗಳವರೆಗೆ ನಡೆದ ಸಾಧನೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಘನ ತ್ಯಾಜ್ಯ ವಿಂಗಡಣೆ ಕಾರ್ಮಿಕರಾದ ಶಾರದಾ ಅವರಿಗೆ ಸನ್ಮಾನಿಸಲಾಯಿತು.
ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಅವರು ಮಹಿಳಾ ಶಿಕ್ಷಣವು ಸಮಾಜದ ಅಭಿವೃದ್ಧಿಗೆ ಹೇಗೆ ಸಹಕಾರಿ ಎಂಬುದರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ, ಪಂಚಾಯತ್ ಸದಸ್ಯರು ಹಾಗೂ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸುಧಾ ಉಪಸ್ಥಿತರಿದ್ದರು.
ಸಂಜೀವಿನಿ ಒಕ್ಕೂಟದ ಎಲ್‌ಸಿಆರ್‌ಪಿ ಶ್ರೀಮತಿ ಲೈಲಾ ಅವರು ಸ್ವಾಗತಿಸಿದರು. ಮಹಿಳಾ ಬಂಧುತ್ವ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಆಶಯಗೀತೆ ಹಾಡಿದರು. ಮಹಿಳಾ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕಿ ಹಾಗೂ ಕಾರ್ಯಕ್ರಮ ಸಂಯೋಜಕಿ ಪ್ರೀಮಿ ಫೆರ್ನಾಂಡಿಸ್ ಅವರು ಪ್ರಸ್ತಾವನೆಗೈದರು. ಶೋಭಾ ಅವರು ಕಾರ್ಯಕ್ರಮ ನಿರೂಪಿಸಿ, ಸುಮಂಗಳಾ ಅವರು ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ನಿರ್ವಹಣಾ ಘಟಕದ ಸಿಬ್ಬಂದಿಗಳು, ಒಕ್ಕೂಟದ ಸದಸ್ಯರು ಹಾಗೂ ವಿವಿಧ ಸಂಘಗಳ ಸದಸ್ಯರು ಭಾಗವಹಿಸಿದ್ದರು.








