ಕ್ರೆಡಿಟ್ ಕಾರ್ಡ್, ಎಟಿಎಂ, ಯುಟಿಲಿಟಿ ಬಿಲ್ ಪಾವತಿ, ಮತ್ತು IMPS ವಹಿವಾಟುಗಳಿಗೆ ಹೊಸ ಶುಲ್ಕಗಳು ಅನ್ವಯ



HDFC ಮತ್ತು ICICI ಬ್ಯಾಂಕ್‌ಗಳು ಜುಲೈ 1, 2025 ರಿಂದ ಸೇವಾ ಶುಲ್ಕಗಳನ್ನು ಹೆಚ್ಚಿಸುತ್ತಿವೆ. ಕ್ರೆಡಿಟ್ ಕಾರ್ಡ್, ಎಟಿಎಂ, ಯುಟಿಲಿಟಿ ಬಿಲ್ ಪಾವತಿ, ಮತ್ತು IMPS ವಹಿವಾಟುಗಳಿಗೆ ಹೊಸ ಶುಲ್ಕಗಳು ಅನ್ವಯವಾಗಲಿವೆ.
ಜುಲೈ 1, 2025 ರಿಂದ, ಈ ಎರಡೂ ಬ್ಯಾಂಕ್‌ಗಳು ತಮ್ಮ ಕೆಲವು ಸೇವೆಗಳ ನಿಯಮಗಳನ್ನು ಬದಲಾಯಿಸುತ್ತಿವೆ. ಇದರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರಿಂದ ಹಿಡಿದು ಸಾಮಾನ್ಯ ಎಟಿಎಂ ಬಳಕೆದಾರರವರೆಗೂ ಎಲ್ಲರ ಮೇಲೆ ಪರಿಣಾಮ ಬೀರಲಿದೆ.
ಇನ್ಮುಂದೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಮೂರನೇ ವ್ಯಕ್ತಿಯ ವ್ಯಾಲೆಟ್‌ಗಳಿಗೆ (Third-Party Wallets) ಅಂದರೆ, ಪೇಟಿಎಂ, ಫೋನ್‌ಪೇ, ಅಮೆಜಾನ್ ಪೇ ನಂತಹ ಆ್ಯಪ್‌ಗಳಿಗೆ ಹಣವನ್ನು ಲೋಡ್ ಮಾಡಿದರೆ, ಅದಕ್ಕೂ ಶುಲ್ಕ ಬೀಳಲಿದೆ. ₹10,000 ಕ್ಕಿಂತ ಹೆಚ್ಚಿನ ಹಣವನ್ನು ವ್ಯಾಲೆಟ್‌ಗೆ ಹಾಕಿದರೆ, ಆ ಮೊತ್ತದ ಮೇಲೆ 1% ಶುಲ್ಕವನ್ನು ಬ್ಯಾಂಕ್‌ಗಳು ವಿಧಿಸುತ್ತವೆ.
ಅಷ್ಟೇ ಅಲ್ಲ, ಪೆಟ್ರೋಲ್ ಬಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವವರಿಗೂ ಶಾಕ್ ಕಾದಿದೆ. ₹15,000 ಕ್ಕಿಂತ ಹೆಚ್ಚಿನ ಮೊತ್ತದ ಇಂಧನ ತುಂಬಿಸಿದರೆ, ಅದಕ್ಕೂ 1% ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಕರೆಂಟ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್, ಇತ್ಯಾದಿ (ಯುಟಿಲಿಟಿ ಬಿಲ್‌ಗಳು) ಪಾವತಿ ಮಾಡುವಾಗಲೂ ಎಚ್ಚರವಿರಲಿ. ನೀವು ಕ್ರೆಡಿಟ್ ಕಾರ್ಡ್ ಬಳಸಿ ₹50,000 ಕ್ಕಿಂತ ಹೆಚ್ಚಿನ ಮೊತ್ತದ ಬಿಲ್ ಪಾವತಿಸಿದರೆ, ಆ ಮೊತ್ತದ ಮೇಲೆ 1% ಹೆಚ್ಚುವರಿ ಶುಲ್ಕವನ್ನು ಕಟ್ಟಬೇಕಾಗುತ್ತದೆ.
ಬ್ಯಾಂಕ್‌ಗಳು ಸಾಮಾನ್ಯವಾಗಿ ತಮ್ಮ ಎಟಿಎಂಗಳಲ್ಲಿ ತಿಂಗಳಿಗೆ 3 ರಿಂದ 5 ಉಚಿತ ವಹಿವಾಟುಗಳನ್ನು ನೀಡುತ್ತವೆ. ಆ ಮಿತಿಯನ್ನು ದಾಟಿದ ನಂತರ ಪ್ರತಿ ವಹಿವಾಟಿಗೆ ಶುಲ್ಕ ವಿಧಿಸಲಾಗುತ್ತದೆ. ಇಲ್ಲಿಯವರೆಗೆ, ಈ ಶುಲ್ಕ ಹೆಚ್ಚುವರಿಯಾಗಿ ₹21 ಇತ್ತು. ಆದರೆ ಜುಲೈ 1 ರಿಂದ, ಈ ಶುಲ್ಕವನ್ನು ₹23 ಕ್ಕೆ ಹೆಚ್ಚಿಸಲಾಗಿದೆ. ಅಂದರೆ, ಉಚಿತ ಲಿಮಿಟ್ ಮುಗಿದ ನಂತರ ನೀವು ಎಟಿಎಂನಿಂದ ಹಣ ತೆಗೆದರೆ, ಪ್ರತಿ ಬಾರಿಯೂ ₹23 ಹೆಚ್ಚುವರಿ ಶುಲ್ಕ ಪಾವತಿಸಬೇಕು.
ICICI ಬ್ಯಾಂಕ್ ತನ್ನ IMPS (ತಕ್ಷಣದ ಪಾವತಿ ಸೇವೆ) ವಹಿವಾಟುಗಳ ಶುಲ್ಕವನ್ನು ಬದಲಾಯಿಸಿದೆ. ಹೊಸ ದರಗಳು ಹೀಗಿವೆ:
₹1,000 ವರೆಗಿನ ವಹಿವಾಟಿಗೆ: ಪ್ರತಿ ಬಾರಿಗೆ ₹2.50
₹1,000 ದಿಂದ ₹1 ಲಕ್ಷದವರೆಗೆ: ಪ್ರತಿ ಬಾರಿಗೆ ₹5
₹1 ಲಕ್ಷದಿಂದ ₹5 ಲಕ್ಷದವರೆಗೆ: ಪ್ರತಿ ಬಾರಿಗೆ ₹15
ಹೆಚ್ಚಿನ ಬ್ಯಾಂಕ್‌ಗಳು ಈಗಾಗಲೇ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಈಗ ಸೇವಾ ಶುಲ್ಕಗಳನ್ನು ಹೆಚ್ಚಿಸುತ್ತಿವೆ. ಆದ್ದರಿಂದ, ಹಿಂದುಮುಂದು HDFC ಮತ್ತು ICICI ಬ್ಯಾಂಕ್‌ಗಳ ಗ್ರಾಹಕರು ಯಾವುದೇ ವಹಿವಾಟು ಮಾಡುವ ಮೊದಲು ಈ ಹೊಸ ನಿಯಮಗಳನ್ನು ನೆನಪಿಸಿಕೊಂಡರೆ, ಅನಗತ್ಯ ಶುಲ್ಕಗಳಿಂದ ಪಾರಾಗಬಹುದು. ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಮತ್ತು ಎಟಿಎಂ ಬಳಸುವಾಗ ಸ್ವಲ್ಪ ಹೆಚ್ಚು ಜಾಗರೂಕರಾಗಿದ್ದರೆ ನಿಮ್ಮ ಹಣ ಉಳಿಸಬಹುದು.