


ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್ಐ) ಮಾಜಿ ಮುಖ್ಯಸ್ಥ, ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಸಹ-ಆರೋಪಿ ವಿನೋದ್ ತೋಮರ್ ಅವರನ್ನು ದೆಹಲಿ ಕೋರ್ಟ್ ಬಿಡುಗಡೆಗೊಳಿಸಿದೆ.
ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಹಾರಹಾಕಿ ಸಂಭ್ರಮಿಸಿದ್ದಾರೆ. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ನನ್ನ ವಿರುದ್ಧ ಆರೋಪ ಹೊರಿಸಲಾದ ದಿನ, ಆರೋಪ ಸಾಬೀತಾದರೆ, ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಇಂದು, ನ್ಯಾಯಾಲಯವು ನನ್ನನ್ನು ಖುಲಾಸೆಗೊಳಿಸಿದೆ. ʻಗೌರವಾನ್ವಿತವಾಗಿ ಖುಲಾಸೆಗೊಳಿಸಲಾಗಿದೆ’ ಎಂಬ ಪದವನ್ನು ಕೋರ್ಟ್ ಬಳಸಿದೆ ಎಂದು ಹೇಳಿದ್ದಾರೆ.
2023 ರಲ್ಲಿ 6 ಮಹಿಳಾ ಕುಸ್ತಿಪಟುಗಳು ಬ್ರಿಜ್ಭೂಷಣ್ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹೊರಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಬಳಿಕ ನಂತರ ಸುಪ್ರೀಂ ಕೋರ್ಟ್ ಸೂಚನೆಯಂತೆ ಬ್ರಿಜ್ಭೂಷಣ್ ವಿರುದ್ಧ ಪೋಕ್ಸೋ ಮತ್ತು ಲೈಂಗಿಕ ಕಿರುಕುಳ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿತ್ತು. ಇದೀಗ ಸುಮಾರು ಎರಡು ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆ ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು ಮಹತ್ವದ ತೀರ್ಪು ನೀಡಿರುವುದಾಗಿ ತಿಳಿದುಬಂದಿದೆ.








