ವಿಟ್ಲ: ಮೆಸ್ಕಾಂ ಗುತ್ತಿಗೆ ಮಾಪಕ ಓದುಗರು(ಮೀಟರ್ ರೀಡರ್‍ಸ್)ಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಹೇಳಿದ್ದಾರೆ.
ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಮನವಿ ನೀಡಿ ಹಲವು ದಿನಗಳು ಕಳೆದರೂ ಜನಪ್ರತಿನಿಧಿಗಳು, ಮೆಸ್ಕಾಂ ಅಧಿಕಾರಿಗಳು ಹಿಂಬರಹ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಮೆಸ್ಕಾಂ ಮೀಟರ್ ರೀಡರ್‍ಸ್‌ಗಳು ಮೆಸ್ಕಾಂನ ಬೆನ್ನಲುಬು ಅಂತಾ ಹೇಳಿಕೊಂಡು ಏಜನ್ಸಿಗಳ ಮೂಲಕ ಈ ಗುತ್ತಿಗೆ ನೌಕರರನ್ನು ಹೆಚ್ಚು ದುಡಿಸಿಕೊಂಡು ಅವರಿಗೆ ಕಡಿಮೆ ವೇತನ ನೀಡಿ ಮೆಸ್ಕಾಂ ಲಾಭವನ್ನುಗಳಿಸುತ್ತಿದೆ ಎಂದರು.
ಕೇಂದ್ರ ಸರ್ಕಾರ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಕನಿಷ್ಟ ವೇತನ ತಿಂಗಳಿಗೆ ೨೧ ಸಾವಿರ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸರ್ಕಾರ ಮತ್ತು ಇಲಾಖೆಗಳು ಈ ಆದೇಶವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಅದಲ್ಲದೇ ಕಳೆದ ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ಹೊರ ಗುತ್ತಿಗೆ ನೌಕರ ಕೆಲಸದ ಸಂದರ್ಭ ಹಾಜರಾಗದಿದ್ದರೂ ನೌಕರನಿಗೆ ವೇತನ ಕಡಿಮೆ ಮಾಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ರಾಜ್ಯ ಸರ್ಕಾರ ಕೂಡಾ ಸಮ್ಮತಿಸಿದೆ. ಆದರೆ ಇದುವರೆಗೂ ಮೆಸ್ಕಾಂ ಇಲಾಖೆಯಾಗಲಿ, ಗುತ್ತಿಗೆದಾರನಾಗಲಿ ಮೀಟರ್ ರೀಡರ್‍ಸ್‌ಗಳಿಗೆ ಏಪ್ರಿಲ್ ತಿಂಗಳ ನೀಡಿಲ್ಲ. ಬಾಕಿಯಾದ ವೇತನವನ್ನು ನೀಡದಿದ್ದರೆ ಮೆಸ್ಕಾಂ ವಿಭಾಗೀಯ ಕಚೇರಿ ಮತ್ತು ಉಪ ವಿಭಾಗೀಯ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ಮೀಟರ್ ರೀಡರ್‍ಸ್‌ಗಳನ್ನು ಮಾನವೀಯತೆ ದೃಷ್ಟಿಯಿಂದ ಈಗ ಇರುವ ಕೆಲಸದಲ್ಲೇ ಖಾಯಂ ಮಾಡುವಂತೆ ಸರ್ಕಾರ ಮತ್ತು ಇಂಧನ ಇಲಾಖೆಗೆ ಮನವಿ ಮಾಡಬೇಕು. ಇವರನ್ನು ನಂಬಿಕೊಂಡು ಹಲವು ಜೀವಗಳು ಜೀವನ ನಡೆಸುತ್ತಿದೆ. ಅವರ ಕೆಲಸದ ವಯೋಮಿತಿ ದಾಟಿದೆ. ಅವರಿಗೆ ಬೇರೆ ಉದ್ಯೋಗ ಸಿಗುವುದು ಕಷ್ಟವಾಗಿದೆ ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಸೋಮಪ್ಪ ಸುರುಳಿಮೂಲೆ, ಪ್ರಸಾದ್ ಅನಂತಾಡಿ ಉಪಸ್ಥಿತರಿದ್ದರು.