Saturday, April 27, 2024
spot_imgspot_img
spot_imgspot_img

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ

- Advertisement -G L Acharya panikkar
- Advertisement -

ಶಿಕಾರಿಪುರ : ರಾಜ್ಯದಲ್ಲಿ ರೈತರ ಹೊಲಗಳಿಗೆ ನೀರನ್ನು ಹರಿಸುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.ಅವರು ಸೋಮವಾರ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಇಂದು ಶಿಕಾರಿಪುರದಲ್ಲಿ ಚಾಲನೆ ನೀಡಲಾಗಿರುವ ಕಲ್ಲುವಡ್ಡು ಏತನೀರಾವರಿ ಯೋಜನೆಯಿಂದಾಗಿ ಶಿಕಾರಿಪುರ ಹಾಗೂ ಸೊರಬ ತಾಲೂಕುಗಳ 3,430 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸಾಧ್ಯವಾಗಲಿದೆ. ಯೋಜನೆಯಿಂದ 41 ಕೆರೆಗಳಿಗೆ ಸಹ ನೀರು ತುಂಬಿಸಲಾಗುತ್ತಿದೆ. ತಾಳಗುಂದ ಹೊಸೂರು ಏತ ನೀರಾವರಿ ಯೋಜನೆ ಈಗಾಗಲೇ ಅನುಷ್ಟಾನಗೊಳ್ಳುತ್ತಿದ್ದು, ಇದರಿಂದ 230 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಲಿದೆ. ಮುಂದಿನ ವರ್ಷ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಅತಿವೃಷ್ಟಿ ತಾಲೂಕುಗಳ ವೈಮಾನಿಕ ಸಮೀಕ್ಷೆಯನ್ನು 21ರಂದು ನಡೆಸಲಿದ್ದೇನೆ. ಪ್ರಧಾನಮಂತ್ರಿ ಅವರು ನೆರೆಪೀಡಿತ ಪ್ರದೇಶಗಳಿಗೆ ಎಲ್ಲಾ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.ಅಕ್ಕಮಹಾದೇವಿ ಅವರ ಜನ್ಮಸ್ಥಳವಾದ ಉಡುತಡಿಯನ್ನು ಪುಣ್ಯಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ನಾವು ಬದ್ಧರಾಗಿದ್ದು ಈಗಾಗಲೇ ಕಾಮಗಾರಿ ಆರಂಭವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ‘ಮನೆಮನೆಗೆ ಗಂಗೆ’ ಯೋಜನೆಯನ್ನು ಕೇಂದ್ರ ಸರಕಾರದ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

125 ಕೋಟಿ ರೂ ವೆಚ್ಚದ ಕಸಬಾ ಏತ ನೀರಾವರಿ ಯೋಜನೆ, 17.80 ಕೋಟಿ ರೂ ವೆಚ್ಚದಲ್ಲಿ ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳದ ಸಮಗ್ರ ಅಭಿವೃದ್ಧಿ ಕಾಮಗಾರಿ 16ಕೋಟಿ ರೂ ವೆಚ್ಚದ ಸನ್ಯಾಸಿಕೊಪ್ಪ ಏತ ನೀರಾವರಿ ಕಾಮಗಾರಿ 8.33 ಕೋಟಿ ರೂ ವೆಚ್ಚದ ಭಕ್ತನಕೊಪ್ಪ ವಿದ್ಯುತ್ ಉಪಕೇಂದ್ರ 9 ಕೋಟಿ ರೂ ವೆಚ್ಚದ ಅಂಬಾರಕೊಪ್ಪ ವಿದ್ಯುತ್ ಉಪಕೇಂದ್ರ ಸೇರಿದಂತೆ ನೂರಾರು ಕೋಟಿ ರೂ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ತೊಗರ್ಸಿ ಹಾಗೂ ಬಿಳಕಿಯಲ್ಲಿ ನಿರ್ಮಿಸಿರುವ ಪಶು ಚಿಕಿತ್ಸಾ ಕೇಂದ್ರ , ಶಿಕಾರಿಪುರ ಹಾಗೂ ಶಿರಾಳಕೊಪ್ಪದಲ್ಲಿ ನಿರ್ಮಿಸಿರುವ ಮೆಟ್ರಿಕ್ ಪೂರ್ವ ಹಾಗೂ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸ್ವಾಗತಿಸಿದರು. ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ತೋಟಗಾರಿಕೆ, ಪೌರಾಡಳಿತ ಸಚಿವ ನಾರಾಯಣಗೌಡ, ಲೋಕಸಭಾ ಸದಸ್ಯ ಬಿ.ಆರ್.ರಾಘವೇಂದ್ರ, ಶಾಸಕರಾದ ಕುಮಾರ ಬಂಗಾರಪ್ಪ, ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!