


ಶಿವಮೊಗ್ಗ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೊಬ್ಬನನ್ನು ಅಪ್ರಾಪ್ತ ಬಾಲಕರು ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸೂಳೆಬೈಲು ಬಡಾವಣೆಯ ಸಂಕೇತ್ ಕೊಲೆಗೀಡಾದ ಬಾಲಕ.
ಸಂಕೇತ್, ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದ. ಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದ್ದ ಕಾರಣ ಸಂಕೇತ್ ಕ್ಲಾಸ್ ಮುಗಿಸಿಕೊಂಡು ವಾಪಸ್ ಮನೆಯತ್ತ ಹೋಗುವಾಗ ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಹಲ್ಲೆ ಮಾಡುತ್ತಿದ್ದುದು ಗಮನಕ್ಕೆ ಬಂದಿದೆ.
ಈ ವೇಳೆ ಗಿರೀಶ್ ನನ್ನು ಬಚಾವ್ ಮಾಡಲು ಅಲ್ಲಿಗೆ ಸಂಕೇತ್ ಹೋಗಿದ್ದು, ಆ ಐವರು ಬಾಲಕರು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದದ್ದಾನೆ. ಗಿರೀಶ್ ತನ್ನ ಮನೆಯವರಿಗೆ ಮತ್ತು ಅಕ್ಕಪಕ್ಕದವರಿಗೆ ಗಲಾಟೆ ಬಗ್ಗೆ ಮಾಹಿತಿ ತಿಳಿಸಿದ್ದು, ಅವರೆಲ್ಲ ಅಲ್ಲಿಗೆ ಹೋಗಿ ನೋಡಿದಾಗ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಮಾರ್ಗ ಮಧ್ಯೆಯೇ ಸಂಕೇತ್ ಕೊನೆಯುಸಿರೆಳೆದಿದ್ದಾನೆ.
ಬಳಿಕ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಹಲ್ಲೆ ನಡೆಸಿದ ಮೂವರು ಬಾಲಕರು ಪರಾರಿಯಾಗಲು ಯತ್ನಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣವು ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವರದಿಯಿಂದ ತಿಳಿದುಬಂದಿದೆ.








