Sunday, July 19, 2026
spot_imgspot_img
spot_imgspot_img

ಅಮೆರಿಕದ ಶ್ವೇತ ಭವನದ ಬಳಿ ಗುಂಡಿನ ದಾಳಿ – ಬಂದೂಕುಧಾರಿ ಸಾವು

- Advertisement -
- Advertisement -

ವಾಷಿಂಗ್ಟನ್‌: ಅಮೆರಿಕದ ಶ್ವೇತ ಭವನದ ಭದ್ರತಾ ತಪಾಸಣಾ ಕೇಂದ್ರದ ಬಳಿ ಶನಿವಾರ ಸಂಜೆ ಭೀಕರ ಗುಂಡಿನ ದಾಳಿ ನಡೆದಿದ್ದು ಪ್ರತಿದಾಳಿಯಲ್ಲಿ ಬಂದೂಕುಧಾರಿಯೊಬ್ಬ ಸಾವನ್ನಪ್ಪಿದ್ದಾನೆ.

ಅಮೆರಿಕದ ಕಾಲಮಾನ ಶನಿವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬ ಶ್ವೇತ ಭವನದ ಬಳಿಯ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಚೆಕ್‌ಪಾಯಿಂಟ್ ಬಳಿ ಬಂದಿದ್ದಾನೆ. ಬಂದವನು ತನ್ನ ಬ್ಯಾಗ್‌ನಿಂದ ಗನ್ ಹೊರತೆಗೆದು ಅಲ್ಲಿ ನಿಯೋಜನೆಗೊಂಡಿದ್ದ ಅಮೆರಿಕ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಅಧಿಕಾರಿಗಳು ಆತನ ಮೇಲೆ ಪ್ರತಿದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶಂಕಿತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ಚಕಮಕಿಯ ನಡುವೆ ಅಲ್ಲೇ ಸಮೀಪದಲ್ಲಿದ್ದ ಒಬ್ಬ ಸಾರ್ವಜನಿಕ ವ್ಯಕ್ತಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಭದ್ರತಾ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಗುಂಡಿನ ಸದ್ದು ಕೇಳಿಸುತ್ತಿದ್ದಂತೆ ಇಡೀ ಶ್ವೇತ ಭವನವನ್ನು ತಕ್ಷಣವೇ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಯಿತು ಮತ್ತು ಅಲ್ಲಿದ್ದ ಪತ್ರಕರ್ತರನ್ನು ಸುರಕ್ಷಿತ ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ನಂತರ ಭದ್ರತೆಯನ್ನು ಖಚಿತಪಡಿಸಿಕೊಂಡು ಲಾಕ್‌ಡೌನ್ ತೆರವುಗೊಳಿಸಲಾಗಿದೆ.

ಘಟನೆ ನಡೆದ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತ ಭವನದಲ್ಲೇ ಇದ್ದರು, ಆದರೆ ಅವರಿಗೆ ಯಾವುದೇ ರೀತಿಯ ಅಪಾಯ ಉಂಟಾಗಿಲ್ಲ ಮತ್ತು ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಸೀಕ್ರೆಟ್ ಸರ್ವೀಸ್ ಖಚಿತಪಡಿಸಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!