ಮುಂಜಾನೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ಟೆಂಟ್ ನಲ್ಲೇ ಆನ್ ಲೈನ್ ಕ್ಲಾಸ್
ಕಾಡು ಮೃಗಗಳ ದಾಳಿಯ ಭೀತಿಯ ನಡುವೆ ಜೀವ ಭಯದಿಂದ ಟೆಂಟ್ ನಲ್ಲೇ ವಾಸ್ತವ್ಯ.
ಬೆಳ್ತಂಗಡಿ:- ಆನ್ ಲೈನ್ ಕ್ಲಾಸ್ ಗಾಗಿ ವಿದ್ಯಾರ್ಥಿಗಳು ದಿನವಿಡೀ ದಟ್ಟ ಅರಣ್ಯದಲ್ಲಿ ಟೆಂಟ್ ಹಾಕಿ ಕುಳಿತು ಶಿಕ್ಷಣ ಕಲಿಯ ಬೇಕಾದ ಅನಿವಾರ್ಯ ಘಟನೆ ಬುದ್ದಿವಂತರ ಜಿಲ್ಲೆಯಲ್ಲಿ ನಡೆದಿದೆ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಆನ್ ಲೈನ್ ಕ್ಲಾಸ್ ಆರಂಭಿಸಲು ಸೂಚಿಸಿರೋದ್ರಿಂದ ನೆಟ್ ವರ್ಕ್ ಇಲ್ಲದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಗಾಗಿ ಸಮೀಪದ ಪೆರ್ಲ ಬೈಕರ ಗುಡ್ಡದಲ್ಲಿ ಟೆಂಟ್ ಹಾಕಿದ್ದಾರೆ.
ಅರಣ್ಯದ ತುತ್ತ ತುದಿಯಲ್ಲಿ ಮಾತ್ರ ನೆಟ್ ವರ್ಕ್ ಸಿಗೋದ್ರಿಂದ ಅಲ್ಲಿ ಬಟ್ಟೆಗಳಿಂದಲೇ ನಿರ್ಮಿಸಿದ ಟೆಂಟ್ ನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೂ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಗೆ ಹಾಜರಾಗುತ್ತಿದ್ದಾರೆ.ದಟ್ಟ ಅರಣ್ಯದಲ್ಲಿ ಕಾಡಾನೆ ಉಪಟಳದ ಜೊತೆಗೆ, ಕಾಡು ಮೃಗಗಳ ದಾಳಿಯ ಭೀತಿಯ ಜೀವ ಭಯದಿಂದ, ಸೊಳ್ಳೆಗಳ ಕಾಟದೊಂದಿಗೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕ್ಲಾಸ್ ಗೆ ಹಾಜರಾಗುತ್ತಿದ್ದಾರೆ.
ಪೋಷಕರು ಆತಂಕದಿಂದಲೇ ಮಕ್ಕಳನ್ನು ಅರಣ್ಯಕ್ಕೆ ಕಳಿಸುತ್ತಿದ್ದು ಊಟ,ತಿಂಡಿಯೊಂದಿಗೆ ಪೋಷಕರೂ ಕಾಡಿಗೆ ಹೋಗುತ್ತಿದ್ದಾರೆ.ಸ್ಥಳೀಯ ಶಾಸಕ ಹರೀಶ್ ಪೂಂಜಾರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯದೆ ಕಳೆದ ಕೆಲ ದಿನಗಳಿಂದ ಇದೇ ಪರಿಸ್ಥಿತಿ ಇದೆ.