ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಐದು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನಕ್ಕೊಳಗಾಗಿದ್ದಾನೆ.

ಬೆಂಗಳೂರು ನಿವಾಸಿ ಮೂರ್ತಿ @ ಪಿಂಟು (37) ಬಂಧಿತ ಆರೋಪಿ. ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವೃಷಭ ಹಾಗೂ ಚರಣ್ ರಾಜ್ ಅವರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಆ.5ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಕುರಿತು ಧರ್ಮಸ್ಥಳ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನವದೆಹಲಿ: ಸರ್ಕಾರಿ ಶಾಲಾ ಶಿಕ್ಷಕರಿಗೆ ಕಡ್ಡಾಯವಾಗಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಉತ್ತೀರ್ಣರಾಗಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಮತ್ತೊಂದು ವರ್ಷ ವಿಸ್ತರಿಸಿದೆ. ಈ ಹಿಂದೆ 2027ರ ಆಗಸ್ಟ್ 31ರವರೆಗೆ ಇದ್ದ ಗಡುವನ್ನು ಇದೀಗ 2028ರ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆ-2009ರ ಸೆಕ್ಷನ್ 23ರ ಪ್ರಕಾರ, ಶಿಕ್ಷಕರಾಗಿ ನೇಮಕಗೊಳ್ಳಲು ಹಾಗೂ ಸೇವೆಯಲ್ಲಿ ಮುಂದುವರಿಯಲು TET ಅರ್ಹತೆ ಕಡ್ಡಾಯವಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣಗಳ ವಿಚಾರಣೆ ವೇಳೆ ಹೆಚ್ಚುವರಿ ಕಾಲಾವಕಾಶಕ್ಕೆ ಅನುಮೋದನೆ ದೊರೆತಿದೆ.
ಇದೇ ವೇಳೆ, ಶಿಕ್ಷಕರಿಗೆ ಪರೀಕ್ಷೆ ಬರೆಯಲು ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ವರ್ಷಕ್ಕೆ ಎರಡು ಬಾರಿ TET ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 2013ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರಿಗೂ ಈ ಆದೇಶ ಅನ್ವಯವಾಗಲಿದ್ದು, ಸೇವಾ ನಿಯಮಗಳ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿರುತ್ತದೆ.








