


ಮಂಡ್ಯ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದು, ಕೆ.ಆರ್ ಪೇಟೆಯಲ್ಲಿ ದಿ.ಕೆ.ಆರ್.ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ಅಭಿಮಾನಿಗಳು ಮುಂದಿನ 10 ವರ್ಷಗಳ ರಾಜಕೀಯದಲ್ಲಿ ಇರುವಂತೆ ಮನವಿ ಮಾಡಿದ್ದಾರೆ. ಆದರೂ 2028ರ ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಮೂಲಕ 2028ಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮೇ.28 ರಂದು ರಾಜೀನಾಮೆ ಸಲ್ಲಿಸಿದ್ದರು. ಈ ಮೂಲಕ ಐದು ದಶಕಗಳ ಸುದೀರ್ಘ ರಾಜಕೀಯ ಚರಿತ್ರೆಯ ದಣಿವರಿಯದ ಹೋರಾಟಗಾರ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಮುಖ್ಯಮಂತ್ರಿ ಆಡಳಿತ ಅಂತ್ಯ ಕಂಡಿತ್ತು. ಹೈಕಮಾಂಡ್ ಸೂಚನೆ ಮತ್ತು ರಾಹುಲ್ ಗಾಂಧಿಯವರ ಸಂದೇಶಕ್ಕೆ ಗೌರವ ನೀಡಿ, ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸುವ ಮೂಲಕ ರಾಜ್ಯ ರಾಜಕಾರಣದ ಮಹತ್ವದ ಹಂತವೊಂದಕ್ಕೆ ಭಾವುಕ ತೆರೆ ಎಳೆದಿದ್ದರು.
ಸಿದ್ದರಾಮಯ್ಯ ಕೇವಲ ಮುಖ್ಯಮಂತ್ರಿ ಆಗಿರದೆ, ಒಂದು ವರ್ಗದ ಕೋಪದ ಧ್ವನಿ, ಒಂದು ಸಮಾಜದ ಆತ್ಮಗೌರವ, ಮೈಸೂರಿನ ಮಣ್ಣಿನ ದನಿ, ಹಿಂದುಳಿದವರ ರಾಜಕೀಯದ ಭಾಷೆ ಎನ್ನುವಷ್ಟು ಮಟ್ಟಿಗೆ ರಾಜಕಾರಣ ಮಾಡಿದ್ದಾರೆ. ಅವರ ನಿವೃತ್ತಿ ಘೋಷಣೆಯ ನಿರ್ಧಾರವು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.








