Tuesday, July 21, 2026
spot_imgspot_img
spot_imgspot_img

ಆಕಸ್ಮಿಕ ಹಾವು ಕಡಿತವಲ್ಲ – ₹3 ಕೋಟಿ ವಿಮೆಗೆ ಪುತ್ರರಿಂದಲೇ ತಂದೆ ಕೊಲೆ- ಬೆಚ್ಚಿಬೀಳಿಸಿದ ಭೀಕರ ಕೊಲೆ ರಹಸ್ಯ

- Advertisement -
- Advertisement -

ತಿರುತ್ತಣಿ (ತಮಿಳುನಾಡು): ಹಾವು ಕಡಿತದಿಂದ ಸಾವು ಎಂದು ಮೊದಲಿಗೆ ದಾಖಲಾಗಿದ್ದ ಪ್ರಕರಣವೊಂದು ವಾರದೊಳಗೆ ಭೀಕರ ಕೊಲೆ ರಹಸ್ಯವಾಗಿ ಬಯಲಾಗಿದ್ದು, 3 ಕೋಟಿ ರೂ. ವಿಮಾ ಹಣಕ್ಕಾಗಿ ಮಕ್ಕಳು ತಂದೆಯನ್ನೇ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೋಥಟ್ಟುರ್ಪೆಟ್ಟೈ ಗ್ರಾಮದ ಸರ್ಕಾರಿ ಶಾಲೆಯ ಪ್ರಯೋಗಾಲಯ ಸಹಾಯಕನಾಗಿದ್ದ 56 ವರ್ಷದ ಇಪಿ ಗಣೇಶನ್ ಅಕ್ಟೋಬರ್ 22ರಂದು ಮನೆ ಮಂಚದ ಮೇಲೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕುತ್ತಿಗೆಯ ಸುತ್ತ ಹಾವು ಕಡಿತದ ಗುರುತುಗಳು ಕಂಡುಬಂದಿದ್ದರಿಂದ ಪೊಲೀಸರು ಆರಂಭದಲ್ಲಿ ಇದನ್ನು ಸಹಜ ಹಾವು ಕಡಿತ ಸಾವು ಎಂದು ದಾಖಲಿಸಿದ್ದರು.


ಆದರೆ ಗಣೇಶನ್ ಅವರ ವಿಮಾ ಕ್ಲೇಮ್‌ಗಳ ಪ್ರಮಾಣ ಮತ್ತು ಕುಟುಂಬದ ಆರ್ಥಿಕ ಸ್ಥಿತಿ ವಿಮಾ ಕಂಪನಿಗೆ ಅನುಮಾನ ಹುಟ್ಟಿಸಿತು. ಒಟ್ಟಾರೆ 11 ವಿಮೆಗಳು ಹಾಗೂ 3 ಕೋಟಿ ರೂ. ಮೌಲ್ಯದ ರಕ್ಷಣಾ ಯೋಜನೆಗಳ ಹಿನ್ನೆಲೆ ಪರಿಶೀಲನೆಗೆ ಕಾರಣವಾಯಿತು. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ವಿಮಾ ಕಂಪನಿ, ಡಿಸೆಂಬರ್ 6ರಂದು ಅಧಿಕೃತ ದೂರು ಸಲ್ಲಿಸಿತು.
ವಿಶೇಷ ತನಿಖಾ ತಂಡ ರಚಿಸಿ ಪರಿಶೀಲನೆ ಆರಂಭಿಸಿದ ಪೊಲೀಸರು, ಮೊಬೈಲ್ ಕರೆ ವಿವರಗಳು, ಹಣ ವರ್ಗಾವಣೆ ದಾಖಲೆಗಳು ಹಾಗೂ ಹಿಂದಿನ ದಿನಗಳ ಚಟುವಟಿಕೆಗಳನ್ನು ಪರಿಶೀಲಿಸಿದಾಗ, ಇದು ಯೋಜಿತ ಕೊಲೆ ಎಂಬುದು ಸ್ಪಷ್ಟವಾಯಿತು.


ತನಿಖೆಯ ಪ್ರಕಾರ, ಗಣೇಶನ್ ಅವರ ಪುತ್ರರಾದ ಮೋಹನ್ರಾಜ್ (29) ಮತ್ತು ಹರಿಹರನ್ (26) ಮೊದಲ ಪ್ರಯತ್ನದಲ್ಲಿ ನಾಗರಹಾವಿನಿಂದ ತಂದೆಯನ್ನು ಕೊಲ್ಲಲು ವಿಫಲರಾಗಿದ್ದರು. ಬಳಿಕ ಮತ್ತಷ್ಟು ಮಾರಕವಾದ ಕಟ್ಟು ಹಾವನ್ನು ಅರಣ್ಯ ಪ್ರದೇಶದಿಂದ ತರಿಸಿ, ನಿದ್ರಿಸುತ್ತಿದ್ದಾಗ ಕುತ್ತಿಗೆಗೆ ಹಲವು ಬಾರಿ ಕಚ್ಚುವಂತೆ ಮಾಡಿದ್ದರು. ಸಾವಿನ ಬಳಿಕ ಹಾವನ್ನು ಸ್ಥಳದಲ್ಲೇ ಕೊಂದಿರುವುದೂ ತನಿಖೆಯಲ್ಲಿ ದೃಢಪಟ್ಟಿದೆ.
ಈ ಕೃತ್ಯಕ್ಕೆ ಹಾವು ಹಿಡಿಯುವವರೂ ಸೇರಿ ಒಟ್ಟು ಆರು ಮಂದಿ ಕೈಜೋಡಿಸಿದ್ದು, ಹಣ ಪಾವತಿಯ ದಾಖಲೆಗಳು ಪ್ರಮುಖ ಸಾಕ್ಷ್ಯವಾಗಿವೆ. ಪ್ರಕರಣ ಭೇದಿಸಿದ ಪೊಲೀಸರು ಮೋಹನ್ರಾಜ್, ಹರಿಹರನ್ ಸೇರಿದಂತೆ ಎಲ್ಲಾ ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಾನವೀಯತೆಯನ್ನು ಮರೆತು ವಿಮಾ ಹಣದ ಆಸೆಗೆ ನಡೆದ ಈ ಘಟನೆ, ಸಮಾಜವನ್ನೇ ಬೆಚ್ಚಿಬೀಳಿಸುವಂತಾಗಿದೆ.

- Advertisement -

Related news

error: Content is protected !!