Friday, July 24, 2026
spot_imgspot_img
spot_imgspot_img

ಕ್ಷಮಿಸಿ, ನಾ ಮಾಡೋದೆಲ್ಲಾ ತಮಾಷೆಗಾಗಿ…

- Advertisement -
- Advertisement -

ನಗು ಬದುಕಿನ ಸಂಜೀವಿನಿ. ಅದು ಎಲ್ಲ ದುಃಖವನ್ನು ಮರೆಸುವ ಶಕ್ತಿಯನ್ನು ಹೊಂದಿದೆ. ನಗುವಿನಿಂದ ಒತ್ತಡ ಕಡಿಮೆಯಾಗುತ್ತದೆ. ಆದರೆ ಇಂದಿನ ಒತ್ತಡದ ಜೀವನದಲ್ಲಿ ನಗುವಿಗೂ ಸಮಯವಿಲ್ಲ ಎನ್ನುವಂತಾಗಿದೆ. ಹಾಗಾಗಿ ಅದೆಷ್ಟೋ ಜನ ಲಾಫಿಂಗ್ ಕ್ಲಬ್ಬಿಗೆ ಸೇರಿಕೊಂಡು ಸ್ವಲ್ಪ ಹೊತ್ತು ನಕ್ಕು ಮನವ ಉಲ್ಲಸಿತಗೊಳಿಸಿ ಬರುತ್ತಾರೆ. ಹೀಗಿರುವಾಗ ಮೂರ್ಖರ ದಿನಾಚರಣೆ ಒಂದು ರೀತಿ ಮರುಭೂಮಿಯ ಓಯಸಿಸ್‌ನ ಹಾಗೆ ಕಾಣಬಹುದೇನೋ. ವರ್ಷದಲ್ಲಿ ಒಮ್ಮೆ ಮನಸ್ಸು ಬಿಚ್ಚಿ ನಗುವ ಅವಕಾಶ ದೊರಕಿಸುವ ದಿನ ಎಂದರೆ ಅದು ಮೂರ್ಖರ ದಿನ.

ನಮಗೆಲ್ಲರಿಗೂ ತಿಳಿದಿರುವಂತೆ ಏಪ್ರಿಲ್ ಒಂದರಂದು ಮೂರ್ಖರ ದಿನವನ್ನು ಆಚರಿಸಲಾಗುತ್ತದೆ. ‘ಏಪ್ರಿಲ್ ಫೂಲ್’ ಎಂದಾಕ್ಷಣ ಮೊದಲು ನೆನಪಾಗುವುದು ನಮ್ಮ ಬಾಲ್ಯವೇ. ಈ ದಿನಕ್ಕಾಗಿ ತುಂಬಾ ಜನ ಕಾತುರದಿಂದ ಕಾಯುತ್ತಾರೆ. ಈ ದಿನ ಸಾಮಾನ್ಯವಾಗಿ ಜನರು ಪರಸ್ಪರ ಕಾಲುಗಳನ್ನು ಎಳೆದುಕೊಂಡು ತಮಾಷೆ ಮಾಡಿಕೊಂಡು ಸಂಭ್ರಮಿಸುತ್ತಾರೆ.

ಈ ದಿನದ ಆಚರಣೆಯೂ ವಿಭಿನ್ನ ರೂಪಗಳಲ್ಲಿ ಕಂಡುಬರುತ್ತದೆ. ಕೆಲವರು ಹಾಸ್ಯಭರಿತ ಸುದ್ದಿಗಳನ್ನು ಹಂಚಿಕೊಂಡರೆ, ಕೆಲವರು ತಮ್ಮ ಸ್ನೇಹಿತರನ್ನು ಮೋಜಿನ ಮಾತುಗಳ ಮೂಲಕ ಮೋಸಗೊಳಿಸುತ್ತಾರೆ. ಶಾಲೆ, ಕಾಲೇಜು, ಕಛೇರಿ, ಮನೆ ಹೀಗೆ ಎಲ್ಲ ಕಡೆ ಏಪ್ರಿಲ್ ಒಂದರಂದು ಜನರು ತಮ್ಮವರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನವನ್ನು ನಡೆಸುತ್ತಾರೆ. ಹೀಗೆ ಈ ದಿನದಂದು ಸಣ್ಣಪುಟ್ಟ ಜೋಕುಗಳೊಂದಿಗೇ ಇಲ್ಲಸಲ್ಲದ ಸುದ್ದಿಗಳನ್ನು ಹೇಳಿ ಮೂರ್ಖರನ್ನಾಗಿಸುವುದೂ ನಡೆಯುತ್ತದೆ. ಇದು ಕೇವಲ ತಮಾಷೆಗಾಗಿ ಮಾಡುವ ಕೃತ್ಯಗಳಾದ್ದರಿಂದ ಯಾರೂ ಬೇಸರಿಸಿಕೊಳ್ಳುವುದೂ ಇಲ್ಲ.

ಭಾರತ ಮಾತ್ರವಲ್ಲದೆ, ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಮೂರ್ಖರ ದಿನವನ್ನು ಆಚರಣೆ ಮಾಡಲಾಗುತ್ತದೆ. 1708 ರಲ್ಲಿ ಬ್ರಿಟಿಷ ವರದಿಗಾರ ‘ಅಪೋಲೊ’ ಎಂಬ ಪತ್ರಿಕೆಯಲ್ಲಿ ಮೂರ್ಖರ ದಿನದ ಬಗ್ಗೆ ಪ್ರಥಮವಾಗಿ ಪ್ರಸ್ತಾಪಿಸಿದ್ದರೆ, ಚಿಯೋಪ್ರೆ ಚಾಸರ್ಸ್ ಬರೆದ “ದ ಕ್ಯಾಂಟರಬರಿ ಟೇಲ್ಸ್” ಕೃತಿಯಲ್ಲಿ ಇದರ ಉಲ್ಲೇಖ ಕಂಡುಬರುತ್ತದೆ. ಸ್ಕಾಟ್ಲೆಂಡಿನಲ್ಲಿ ಏಪ್ರಿಲ್ 1 ರಂದು ‘ಗೌಕ್’ ಎಂಬ ಪಕ್ಷಿಯನ್ನು ಬೇಟೆಯಾಡಿ ನಂತರ ತಮಾಷೆ ಮಾಡುವ ದಿನವಾಗಿ ಆಚರಿಸುತ್ತಾರೆ. ಈ ‘ಗೌಕ್’ ಎಂಬುದು ಮೂರ್ಖರ ಸಂಕೇತವಾಗಿದೆ. ಇಂಗ್ಲೆಂಡಿನಲ್ಲಿ ಏಪ್ರಿಲ್ 1ರ ಬೆಳಗಿನ ಜಾವ ಮಾತ್ರ ಫೂಲ್ ಮಾಡಲಾಗುತ್ತದೆ. ಮಧ್ಯಾಹ್ನದ ನಂತರ ಫೂಲ್ ಮಾಡುವುದು ಒಳಿತಲ್ಲ ಎಂದು ಭಾವಿಸಲಾಗಿದೆ. ಹಾಸ್ಯಕ್ಕೀಡಾದ ವ್ಯಕ್ತಿಯನ್ನು ‘ನೂಡಲ್’ ಎಂದು ಕರೆಯಲಾಗುತ್ತದೆ. ರೋಮ್‌ನಲ್ಲಿ ಈ ದಿನವನ್ನು ‘ಹಿಲೇರಿಯಾ ಹಬ್ಬ’ ಎಂದು ಆಚರಿಸಲಾಗುತ್ತದೆ. ಪೋರ್ಚುಗಲ್‌ನಲ್ಲಿ ಭಾನುವಾರ ಮತ್ತು ಸೋಮವಾರದಂದು ಆಚರಿಸಲಾಗುತ್ತದೆ. ಮೆಕ್ಸಿಕೋದಲ್ಲಿ ಏಪ್ರಿಲ್ ಫೂಲ್ ದಿನವನ್ನು ಡಿಸೆಂಬರ್ 27ರಂದು ಆಚರಿಸಲಾಗುತ್ತದೆ.


ಮೂರ್ಖರ ದಿನ ಅಥವಾ ಏಪ್ರಿಲ್ ಫೂಲ್ ದಿನವೆಂದೇ ಪ್ರಸಿದ್ಧಿ ಪಡೆದಿರುವ ಏಪ್ರಿಲ್ ಒಂದನೆಯ ದಿನಕ್ಕೆ ತನ್ನದೇ ಆದ ಸ್ಪಷ್ಟ ಇತಿಹಾಸವಿಲ್ಲ. ಈ ಪರಂಪರೆ ಯಾವ ಕಾಲಘಟ್ಟದಲ್ಲಿ ಪ್ರಾರಂಭವಾಯಿತೆಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ. ಆದರೆ 1381ರಲ್ಲಿ ಮೊದಲ ಬಾರಿಗೆ ಏಪ್ರಿಲ್ 1ರಂದು ಮೂರ್ಖರ ದಿನವನ್ನು ಆಚರಿಸಲಾಯಿತು ಎಂದು ನಂಬಲಾಗಿದೆ. ಇಂಗ್ಲೆಂಡ್‌ನ ರಾಜ ರಿಚರ್ಡ್ II ಮತ್ತು ಬೊಹೆಮಿಯಾದ ರಾಣಿ ಅನ್ನಿ ಅವರು ಮಾರ್ಚ್ 32, 1381 ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಘೋಷಿಸಿದಾಗ ಸಾರ್ವಜನಿಕರು ಸಂತಸಗೊಂಡು ಸಂಭ್ರಮಿಸಲಾರಂಭಿಸಿದರಂತೆ. ಆದರೆ ನಂತರ ಮಾರ್ಚಿನಲ್ಲಿ 32ನೇ ತಾರೀಕು ಇರುವುದಿಲ್ಲವೆಂದು ಅರಿವಾದಾಗ ಮೂರ್ಖರಾದುದು ತಿಳಿಯಿತಂತೆ. ಅಂದಿನಿಂದ ಜನರು ಪ್ರತಿ ವರ್ಷ ಏಪ್ರಿಲ್ 1 ಅನ್ನು ಮೂರ್ಖರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರು ಎಂದು ನಂಬಲಾಗಿದೆ.

ಇನ್ನೊಂದು ಮಾಹಿತಿಯ ಪ್ರಕಾರ, ಏಪ್ರಿಲ್ ಫೂಲ್ ಮೊದಲು ಹುಟ್ಟಿದ್ದು ಫ್ರಾನ್ಸ್ ದೇಶದಲ್ಲಿ ಎಂದು ಹೇಳಲಾಗುತ್ತದೆ. ಬಳಿಕ ಇದನ್ನು ಯುರೋಪಿನ ದೇಶಗಳಲ್ಲೂ ಆಚರಿಸಲು ಆರಂಭಿಸಿದರು. ನಂತರ ಅಲ್ಲಿಂದ ಅದು ಹಲವು ದೇಶಗಳಿಗೆ ಹಬ್ಬಿತು.

ಹಲವು ದಶಕಗಳ ಹಿಂದೆ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 1 ರಂದು ಹೊಸ ವರ್ಷವನ್ನು ಆಚರಿಸಲಾಗುತ್ತಿತ್ತಂತೆ. ಫ್ರಾನ್ಸ್ ದೇಶವು ಪೋಪ್ XIIIನೇ ಗ್ರೆಗೊರಿ ಸೂಚನೆ ಪ್ರಕಾರ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆ ಮಾಡಲು ಆರಂಭಿಸಿತಂತೆ. ಅಂದಿನ ಕಾಲದಲ್ಲಿ ಸಂಪರ್ಕ ಮಾಧ್ಯಮ ಸೀಮಿತವಾಗಿದ್ದ ಪರಿಣಾಮ ಈ ಬದಲಾವಣೆಯ ಸುದ್ದಿ ಅನೇಕ ದೇಶಗಳಿಗೆ ತಲುಪಲು ಹಲವು ವರ್ಷಗಳೇ ಬೇಕಾಯಿತು. ಕೆಲವು ಸಂಪ್ರದಾಯಸ್ಥರು ಹೊಸ ಕ್ಯಾಲೆಂಡರ್ ಅನ್ನು ಒಪ್ಪಿಕೊಳ್ಳದೆ ಏಪ್ರಿಲ್ 1ರಂದೇ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಈ ಜನರನ್ನು ಉಳಿದವರು ಮೂರ್ಖರೆಂದು ಕರೆಯಲಾರಂಭಿಸಿದರು. ಹೀಗೆ ಹಳೆಯ ಪದ್ಧತಿಯನ್ನು ಅನುಸರಿಸಿದವರನ್ನು ಜನರು ಹಾಸ್ಯಮಾಡಲು ಆರಂಭಿಸಿದುದು ಈ ದಿನದ ಮೂಲ ಎಂದು ನಂಬಲಾಗಿದೆ.

ಈ ಸಂಪ್ರದಾಯವೇ 18ನೆಯ ಶತಮಾನದಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡಿಗೂ ವಿಸ್ತರಣೆಗೊಂಡು, ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಗಳಲ್ಲೂ ಬೆಳೆಯಿತು. ಹಾಗಾಗಿ ಏಪ್ರಿಲ್ ಫೂಲ್ ದಿನಾಚರಣೆ ಜಾಗತಿಕ ಹಾಸ್ಯ ಹಬ್ಬವಾಗಿ ಪರಿಣಮಿಸಿ ವಿವಿಧ ದೇಶಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ವ್ಯಕ್ತವಾಗತೊಡಗಿತು. ಕಾಲಕ್ರಮೇಣ ಏಪ್ರಿಲ್ 1 ರಂದು ಸ್ನೇಹಿತರನ್ನು, ಜನಸಾಮಾನ್ಯರನ್ನು ಮೂರ್ಖರನ್ನಾಗಿಸುವುದು ಸಾಮಾನ್ಯವಾಯಿತು.

ಏಪ್ರಿಲ್ 1 ರಂದು ಯಾರು ಏನನ್ನೇ ಹೇಳಿದರೂ ಒಮ್ಮೆ ಪರಾಮರ್ಶೆ ಮಾಡಿಕೊಳ್ಳಲೇಬೇಕು. ಒಂದು ಕ್ಷಣ ಮೈಮರೆತರೆ ಆತ್ಮೀಯರೇ ನಮ್ಮನ್ನು ಮೂರ್ಖರನ್ನಾಗಿ ಮಾಡಿ ಬಿಡುತ್ತಾರೆ. ಆದರೆ ಇದೆಲ್ಲವೂ ಕೇವಲ ತಮಾಷೆಗಾಗಿ ಮಾತ್ರ. ಹೆಚ್ಚಾಗಿ ಕಟ್ಟುಕಥೆ, ಸುಳ್ಳು ಹಾಗೂ ಭಯ ಹುಟ್ಟಿಸುವಂತಹ ಕೆಲವು ಮಾತುಗಳನ್ನು ಮೂರ್ಖರನ್ನಾಗಿಸಲು ಬಳಸುತ್ತಾರೆ.

ಈಗಿನ ಜನರಲ್ಲಿ ಹಾಸ್ಯ ಪ್ರವೃತ್ತಿ ಇಲ್ಲವೇ ಎನ್ನುವಂತಾಗಿದೆ. ಎಲ್ಲರೂ ಗಂಭೀರವಾಗಿ ಬದುಕುವುದನ್ನು ರೂಢಿಸಿಕೊಂಡು ನಗುವುದನ್ನೇ ಮರೆತಿದ್ದಾರೆ. ಹೀಗಾಗಿ ತಮಾಷೆ ಮಾಡುವ ಮೂಲಕ ಎಲ್ಲರ ಮುಖದಲ್ಲಿ ನಗು ತರಿಸುವ ಉದ್ದೇಶದಿಂದ ಈ ದಿನದ ಆಚರಣೆ ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತಮಾಷೆಗಳನ್ನು ಮಾಡಿ ಮೂರ್ಖರನ್ನಾಗಿಸಿ ಈ ದಿನವನ್ನು ಎಂಜಾಯ್ ಮಾಡುತ್ತಾರೆ.

ಅದೇನೇ ಇರಲಿ. ಈ ದಿನದ ಹಿನ್ನೆಲೆಯಲ್ಲಿ ಯಾರನ್ನೂ ನೋಯಿಸಲು ಪ್ರಯತ್ನಿಸಬೇಡಿ. ಬದಲಾಗಿ ನಗು ಮತ್ತು ಹಾಸ್ಯಕ್ಕೆ ಮಾತ್ರ ದಿನವನ್ನು ಸೀಮಿತಗೊಳಿಸಿ. ವ್ಯಕ್ತಿಯ ಭಾವನೆಗಳಿಗೆ ಧಕ್ಕೆ ತರುವ ಅಥವಾ ಅಪಾಯ ಉಂಟುಮಾಡುವ ಪ್ರ್ಯಾಂಕ್‌ಗಳನ್ನು ತಪ್ಪಿಸುವುದು ಅವಶ್ಯಕ. ಯಾರಿಗೂ ತಪ್ಪು ಮಾಹಿತಿಯನ್ನು ನೀಡಬೇಡಿ. ಇಡೀ ದಿನ ‘ಏಪ್ರಿಲ್‌ ಪೂಲ್‌’ ಎನ್ನುತ್ತಾ ಇದ್ದರೆ ಇದು ತನ್ನ ಸ್ವಾದವನ್ನು ಕಳೆದುಕೊಳ್ಳುತ್ತದೆ. ಒಟ್ಟಿನಲ್ಲಿ, ಈ ದಿನ ನಮ್ಮ ಜೀವನದಲ್ಲಿ ನಗುವಿನ ಮಹತ್ವವನ್ನು ಸಾರುವ ದಿನವಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ಸ್ವಲ್ಪ ನಗು ಮತ್ತು ಸಂತೋಷ ಎಲ್ಲರಿಗೂ ಅಗತ್ಯ. ಆದ್ದರಿಂದ ಈ ದಿನವನ್ನು ಗೌರವ ಮತ್ತು ಮಿತಿಯೊಂದಿಗೆ ಆಚರಿಸಿ ನಗುವನ್ನು ಹಂಚಿಕೊಳ್ಳೋಣ.

✍ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!