




ಹೊಸ ಸಂಸತ್ ಭವನದ ಲೋಕರ್ಪಾಣೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ನೆರವೇರಿಸಲಿದ್ದಾರೆ. ತ್ರಿಕೋನಾಕಾರದಲ್ಲಿರುವ ಕಟ್ಟಡವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಸಂಸ್ಥೆ ನಿರ್ಮಿಸಿದ್ದು 64,500 ಚದರ ಮೀಟರ್ ಜಾಗದಲ್ಲಿ ಇದನ್ನು ಕಟ್ಟಲಾಗಿದೆ. ಸೆಂಟ್ರಲ್ ವಿಸ್ತಾ ಪುನರ್ ನಿರ್ಮಾಣ ಯೋಜನೆ ಭಾಗವಾಗಿದೆ.
ರೂ. 970 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಕಟ್ಟಡ ಪ್ರಧಾನಿ ಮೋದಿಯವರ ಕನಸಿನ ಕೂಸು ಎನ್ನಬಹುದು. ತ್ರಿಕೋನಾಕಾರದಲ್ಲಿರುವ ಕಟ್ಟಡವು ಲೋಕ ಸಭಾ, ರಾಜ್ಯ ಸಭಾ, ಕೇಂದ್ರೀಯ ಹಾಲ್ ಮತ್ತು ಸಂವೈಧಾನಿಕ ಅಧಿಕಾರಿಗಳ ಕಚೇರಿಗಳನ್ನು ಹೊಂದಿದೆ. ಲೋಕ ಸಭೆಯ ಆಂಗಣವನ್ನು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಹಾಗೆ ವಿನ್ಯಾಸಗೊಳಿಸಲಾಗಿದೆ.
ರಾಜ್ಯ ಸಭೆಯ ಆಂಗಣವು ಭಾರತದ ರಾಷ್ಟ್ರೀಯ ಹೂವು ಕಮಲವನ್ನು ಹೋಲುತ್ತದೆ. 1947 ರಲ್ಲಿ ಭಾರತ ಬ್ರಿಟಿಷ್ ಆಡಳಿತದಿಂದ ಮುಕ್ತವಾದ ಬಳಿಕ ಅಧಿಕಾರ ಹಸ್ತಾಂತರದ ಸಂಕೇತವಾಗಿ ಆಗಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವೀಕರಿಸಿದ ಹೊನ್ನಿನ ರಾಜದಂಡವನ್ನು ಹೊಸ ಸಂಸತ್ ಭವನದಲ್ಲಿ ಇಡಲಾಗಿದೆ. ಭವನದಲ್ಲಿ 888 ಲೋಕ ಸಭಾ ಸದಸ್ಯರು ಮತ್ತು 384 ರಾಜ್ಯ ಸಭಾ ಸದಸ್ಯರು ಕುಳಿತುಕೊಳ್ಳಲು ಆಸನಗಳನ್ನು ಮಾಡಲಾಗಿದೆ.