

ಐಪಿಎಲ್ ಕ್ರಿಕೆಟಿನಲ್ಲಿ ಮುಂಬೈ ಇಂಡಿಯನ್ಸ್ -ಚೆನ್ನೈ ನಡುವಣ ಪಂದ್ಯದಲ್ಲಿ ಮುಂಬೈ ನಿನ್ನೆ ಸೋತರೂ, ಅನಾಯಾಸ ಗೆಲುವು ಪಡೆಯಬಹುದೆಂಬ ಚೆನ್ನೈ ಲೆಕ್ಕಾಚಾರವನ್ನು ಉಲ್ಟಾ ಮಾಡಿ, ಕೊನೆಯ ಓವರಿನ ತನಕ ಮ್ಯಾಚ್ ಕೊಂಡೊಯ್ದು, ಮುಂಬೈ ಘನತೆ ಕಾಪಾಡಿದ ಬೌಲರ್ ವಿಘ್ನೇಶ್ ಪುತ್ತೂರು ಒಂದೇ ದಿನದಲ್ಲಿ ಕ್ರಿಕೆಟ್ ಜಗತ್ತಿನ ಕೌತುಕವಾಗಿ ಬದಲಾಗಿದೆ.
ಘಟಾನುಘಟಿ ಕ್ರಿಕೆಟರ್ ಗಳನ್ನು ಹೊಂದಿದ ಚೆನ್ನೈ ವಿರುದ್ಧ ಮುಂಬೈಯಂಥಾ ತಂಡದಲ್ಲಿ ಹೇಳ ಹೆಸರಿಲ್ಲದ ಹುಡುಗನ ತಾರೋದಯ ಕಂಡು ಕ್ರಿಕೆಟ್ ಲೋಕ ಈ ಹುಡುಗನ ಅನ್ವೇಷಣೆಗೆ ಹೊರಟಿದೆ.ಇನ್ನೂ ಕೂಡಾ ಕೇರಳ ತಂಡದಲ್ಲಿ ಆಡದ, ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆ ಮಾಡದ 23ರ ಹರೆಯದ ಈತನ ಹೆಸರು ವಿಘ್ನೇಶ್ ಪುತ್ತೂರು. ಈತ ಕೇರಳದ ಮಲಪ್ಪುರಂ ಜಿಲ್ಲೆಯ ಬಡ ರಿಕ್ಷಾ ಚಾಲಕನ ಮಗ. ಕೇರಳ ಪ್ರೀಮಿಯರ್ ಲೀಗಿನಲ್ಲಷ್ಟೇ ಆಡಿದ್ದ ವಿಘ್ನೇಶ್ ಕನಿಷ್ಟ ಬೆಲೆಯಾದ 30ಲಕ್ಷಕ್ಕೆ ಐಪಿಎಲ್ ಏಲಂ ನಲ್ಲಿ ಮುಂಬೈ ಪಾಲಾಗಿದ್ದರು. ನೆಟ್ ಪ್ರಾಕ್ಟೀಸಿನಲ್ಲಿ ಈತನ ಬೌಲಿಂಗ್ ಕಂಡು ಸಹ ಆಟಗಾರರು ದಂಗಾಗಿದ್ದರು. ಹೀಗಾಗಿ ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮ ಬದಲಿಗೆ ಇಂಪ್ಯಾಕ್ಟ್ ಆಟಗಾರನಾಗಿ ವಿಘ್ನೇಶ್ ನನ್ನು ಕಣಕ್ಕಿಳಿಸಲಾಗಿತ್ತು. ಐಪಿಎಲ್ ಪಾದಾರ್ಪಣೆಯ ಮೊದಲ ಪಂದ್ಯದಲ್ಲೇ ಯಾವ ಭಯ, ಆತಂಕಗಳಿಲ್ಲದೇ ಚೆಂಡೆಸೆದ ವಿಘ್ನೇಶ್ 3ಒವರಲ್ಲಿ 3ವಿಕೆಟ್ ಪಡೆದು ಚೆನ್ನೈ ಓಟಕ್ಕೆ ನಿಧಾನತೆಯ ಬ್ರೇಕ್ ಹಾಕಿದರು. ಮುಂಬೈಗೆ ನೆಮ್ಮದಿಯ ಉಸಿರಿತ್ತರು.ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕ್ರಿಕೆಟ್ ಬೌಲರ್ ಆಗಿ ರೂಪುಗೊಂಡ ವಿಘ್ನೇಶ್ ಬದುಕು ಐಪಿಎಲ್ ಮ್ಯಾಚೊಂದರಿಂದಲೇ ಬದಲಾಗಿದೆ. ಸ್ಟಾರ್ ಆಟಗಾರರ ದೃಷ್ಟಿ ಈತನ ಮೇಲೆ ಬಿದ್ದಿದೆ.
ಪಂದ್ಯ ಮುಗಿದಾಗ ಮೈದಾನದಲ್ಲಿ ಸಾಕ್ಷಾತ್ ಎಂ.ಎಸ್.ಧೋನಿಯೇ ಈ ಹುಡುಗನ ಬೆನ್ನುತಟ್ಟಿ ಅಭಿನಂದನೆ ಹೇಳಿದ್ದಾರೆ.ಐಪಿಎಲ್ ನಲ್ಲಿ ಅವಕಾಶ, ಅಭ್ಯಾಸ ಎರಡೂ ದೊರೆತರೆ ಸಂಜು ಸ್ಯಾಮ್ಸನ್ ಬೆನ್ನಲ್ಲೇ ವಿಘ್ನೇಶ್ ಕೂಡಾ ಭಾರತೀಯ ಕ್ರಿಕೆಟಿನ ಕದ ತಟ್ಟುವ ನಿರೀಕ್ಷೆ ಇದೆ..ಇಷ್ಟ್ಭಕ್ಕೂ ಮುಂಬೈ ಇಂಡಿಯನ್ಸ್ ತಂಡವೇ ಹಾಗೆ. ಅದು ಕ್ರಿಕೆಟ್ ಪ್ರತಿಭೆಗಳನ್ನು ಶೋಧಿಸಿ, ಅವಕಾಶ ಇತ್ತು ಬೆಳೆಸುತ್ತದೆ. ಇಂದು ಭಾರತೀಯ ಯುವ ಪಡೆಯ ಬಹುತೇಕ ಆಟಗಾರರೂ ಮುಂಬೈ ಇಂಡಿಯನ್ಸ್ ಮೂಲಕವೇ ಬಂದರು.