




ಪಣಜಿ: ರಸ್ತೆಬದಿ ಕಸ ಎಸೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ ಮನನೊಂದು ವಿದ್ಯಾರ್ಥಿಯೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋವಾದ ಮಾಪುಸಾದಲ್ಲಿ ನಡೆದಿದೆ.
ಸ್ಯಾಮ್ಯುಯೆಲ್ ಡಿ ಬ್ರಗಾಂಕಾ (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸ್ಯಾಮ್ಯುಯೆಲ್ ಆತನ ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದು, ಎರಡನೇ ವರ್ಷದ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದನು. ಸ್ಯಾಮ್ಯುಯೆಲ್ ಉತ್ತರ ಗೋವಾದ ರಸ್ತೆಬದಿ ಕಸ ಎಸೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈತನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ವೀಡಿಯೋ ವೈರಲ್ ಆದ ಬೆನಲ್ಲೇ ಪೊಲೀಸರು ಸ್ಯಾಮ್ಯುಯೆಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಸ್ಯಾಮ್ಯುಯೆಲ್‌ನನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಯಿತು.
ಪ್ರಕರಣ ಸಂಬಂಧ ಪೊಲೀಸರು ವಿದ್ಯಾರ್ಥಿಗೆ ನೋಟಿಸ್ ನೀಡಿದ್ದರು. ಸ್ಯಾಮ್ಯುಯೆಲ್ ಕೂಡ ವಿಚಾರಣೆಗೆ ಹಾಜರಾಗಿ ಸಹಕರಿಸಿದ್ದ. ಆದರೂ ಘಟನೆಯಿಂದ ಮನನೊಂದು ಕುಟುಂಬಕ್ಕೆ ಸೇರಿದ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟುಹೊತ್ತಿಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ವೀಡಿಯೋ ವೈರಲ್ ಆದ ನಂತರ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕ ಟೀಕೆಗೆ ಗುರಿಯಾದ ನಂತರ ವಿದ್ಯಾರ್ಥಿ ತೀವ್ರ ಒತ್ತಡಕ್ಕೆ ಒಳಗಾಗಿದ್ದು, ಮಾನಸಿಕವಾಗಿ ಕುಗ್ಗಿದ್ದ ಎಂದು ವಿದ್ಯಾರ್ಥಿಯ ಕುಟುಂಬ ಪೊಲೀಸರಿಗೆ ತಿಳಿಸಿದೆ. ಘಟನೆ ಸಂಬಂಧ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.








