ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರಿಂದ ಹರೀಶ್ ಇಂಜಾಡಿಗೆ ನೋಟಿಸು



ಸುಬ್ರಹ್ಮಣ್ಯ: ನಿಯಮಕ್ಕೆ ವಿರುದ್ದವಾಗಿ ವರ್ತಿಸಿರುವ ಬಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿರವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಬೆಂಗಳೂರು ಸದಸ್ಯ ಕಾರ್ಯದರ್ಶಿ ಡಾ|. ಎಂ.ವಿ.ವೆಂಕಟೇಶ್‌ರವರು ನೋಟಿಸು ನೀಡಿದ್ದಾರೆ.
ಸಮಿತಿಯ ಅಧ್ಯಕ್ಷರಾಗಿ ದೇಗುಲಕ್ಕೆ ಸಂಬಂಧಿಸಿದ ನಿಯಮಗಳ ವಿರುದ್ಧವಾಗಿ ನಡೆದುಕೊಂಡಿರೋದಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಉಲ್ಲೇಖ(1)ರ ನಡವಳಿ ಆದೇಶದಂತೆ ವ್ಯವಸ್ಥಾಪನಾ ಸಮಿತಿಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ರಚಿಸಲಾಗಿತ್ತು.
ಈ ವ್ಯವಸ್ಥಾಪನಾ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮ ಇಂಜಾಡಿ ನಿವಾಸಿ ಹರೀಶ ಎಸ್‌ರವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.
ರಾಜ್ಯ ಸರ್ಕಾರ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿರುದ್ಧ ಉತ್ತರಾಧಿಮಠದವರು ಮಾನ್ಯ ಉಚ್ಚನ್ಯಾಯಾಲಯದಲ್ಲಿ ದಾವೆ ಪ್ರಕರಣ ಸಂಖ್ಯೆ: ಡ.ಬ್ಲ್ಯೂ.ಪಿ ನಂ.11063/2020ರನ್ನು ದಾಖಲಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಮತ್ತು ಹಿಂದೂ ಧಾರ್ಮಿಕ ದತ್ತಿ ಸಚಿವರ ಹೆಸರಿಗೆ ವಿಳಾಸಿ ದಿನಾಂಕ:01.08.2025ರ ಪತ್ರವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ಸಹ ತರದೆ ಪತ್ರ ವ್ಯವಹಾರವನ್ನು ನಡೆಸಿದ್ದು, ಈ ಬಗ್ಗೆ ಉಲ್ಲೇಖ(3)ರಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ವರದಿ ಮಾಡಿರುತ್ತಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ನಿಯಮ 33ರನ್ವಯ ಅಧಿಸೂಚಿತ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡದಿರುವ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಿಗೆ ಜವಾಬ್ದಾರಿವಹಿಸಿರುವಂತೆ ಅಧಿಕಾರಿಗಳನ್ನು ಚಲಾಯಿಸಬೇಕಾಗಿರುತ್ತದೆ. ಆದರೆ ತಾವು ಈ ನಿಯಮದ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಾಹಕ ಅಧಿಕಾರಿಗಳು ನೇಮಕವಾಗಿರುವ ಅಧಿಸೂಚಿತ ಸಂಸ್ಥೆಯ ವಿರುದ್ಧವಾಗಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೇ ಮತ್ತು ಪ್ರಕರಣದ ಪೂರ್ವಪರಗಳನ್ನು ಇಲಾಖೆಯ ಕಾಯ್ದೆ ಮತ್ತು ನಿಯಮಗಳ ಪರಿಧಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳದೆ ನೇರವಾಗಿ ಸಚಿವರೊಂದಿಗೆ ಪತ್ರ ವ್ಯವಹರಿಸಿರುವುದು ಆಕ್ಷೇಪಾರ್ಹವಾಗಿರುತ್ತದೆ.
ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿಈ ಪ್ರಮುಖ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಾಧಿಯಲ್ಲಿರುವ ನೀವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ನಿಯಮ 33ರಲ್ಲಿ ಕಲ್ಪಿಸಿರುವ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿರುವುದರಿಂದ ತಮ್ಮ ವಿರುದ್ಧ ಏಕೆ ನಿಯಮಾನುಸಾರ ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ಈ ನೋಟೀಸು ತಲುಪಿದ ಏಳು (7) ದಿನಗಳೊಳಗಾಗಿ ಈ ಕಛೇರಿಗೆ ತಮ್ಮ ಲಿಖಿತ ಸಮಜಾಯಿಸಿ/ಹೇಳಿಕೆ ಸಲ್ಲಿಸಲು ತಿಳಿಸಿದೆ.
ತಪ್ಪಿದ್ದಲ್ಲಿ ನಿಮ್ಮ ಸಮಜಾಯಿಷಿ/ಹೇಳಿಕೆ ಏನೂ ಇಲ್ಲವೆಂದು ಭಾವಿಸಿ ನಿಮ್ಮನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವದಿಂದ ತೆಗೆದು ಹಾಕಲು ಕಾನೂನು ರೀತ್ಯಾ ಮುಂದಿನ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಬೆಂಗಳೂರು ಸದಸ್ಯ ಕಾರ್ಯದರ್ಶಿ ಡಾ|. ಎಂ.ವಿ.ವೆಂಕಟೇಶ್‌ರವರು ತಿಳಿಸಿದ್ದಾರೆ.








