ಕೊರೋನಾ ಹಿನ್ನೆಲೆ ಇಂದು ಕ್ಷೇತ್ರಕ್ಕೆ ಭಕ್ತರ ಪ್ರವೇಶ ನಿಷೇಧ.
ಕ್ಷೇತ್ರದ ಅರ್ಚಕರು ಮತ್ತು ಸಿಬ್ಬಂದಿಯಿಂದ ನಾಗರಪಂಚಮಿ ಆಚರಣೆ
ಸುಬ್ರಹ್ಮಣ್ಯ:-ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಕ್ತರಿಲ್ಲದೆ ನಾಗರಪಂಚಮಿ ಆಚರಿಸಲಾಯಿತು. ಈ ಬಾರಿಯ ಕೊರೋನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಕುಕ್ಕೆ ಕ್ಷೇತ್ರದಲ್ಲಿ ನಾಗರಪಂಚಮಿಯ ವಿಶೇಷ ದಿನವಾದ ಇಂದು ನಿರ್ಬಂಧ ಹೇರಲಾಗಿತ್ತು.ಭಕ್ತರು ಬಂದ್ರೆ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯಿಂದಲೂ ತೊಂದರೆಯಾಗುತ್ತದೆ,ಹೀಗಾಗಿ ಇಂದು ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
ನಾಗರ ಪಂಚಮಿಯ ದಿನ ನಾಗದೇವರಿಗೆ ವಿಶೇಷ ದಿನವಾಗಿರೋದ್ರಿಂದ ಕುಕ್ಕೆ ಕ್ಷೇತ್ರದಲ್ಲಿ ಅರ್ಚಕರು ನಾಗದೇವರ ಕಲ್ಲಿಗೆ ಸೀಯಾಳಾಭಿಶೇಕ,ಹಾಲಿನ ಅಭಿಷೇಕ ನಡೆಸಿ ನಾಗರಪಂಚಮಿಯ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಕ್ಷೇತ್ರದ ಸಿಬ್ಬಂದಿಗಳು ಹಾಗೂ ಅರ್ಚಕರು ಮಾತ್ರ ಉಪಸ್ಥಿತರಿದ್ದರು.ಪ್ರತೀ ವರ್ಷ ನಾಗರಪಂಚಮಿಯ ದಿನದಂದು ಲಕ್ಷಾಂತರ ಮಂದಿ ಕುಕ್ಕೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ರೂ, ಈ ಬಾರಿ ಮಾತ್ರ ಬೆರಳೆಣಿಕೆಯ ಭಕ್ತರು ದೇವಸ್ಥಾನದ ಹೊರಗಿನಿಂದಲೇ ನಮಸ್ಕರಿಸಿ ತೆರಳಿದರು.