Saturday, April 27, 2024
spot_imgspot_img
spot_imgspot_img

ಸುಬ್ರಹ್ಮಣ್ಯ: ಗುಡುಗು ಸಹಿತ ಬಾರೀ ಗಾಳಿ ಮಳೆಗೆ ಅಪಾರ ಪ್ರಮಾಣದ ಹಾನಿ!

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಕಡಬ ತಾಲೂಕಿನಾದ್ಯಂತ ಬುಧವಾರ ಸಂಜೆಯ ಗುಡುಗು ಸಹಿತ ಬಾರೀ ಗಾಳಿ ಮಳೆಗೆ ಮನೆ, ವಿದ್ಯುತ್‌ ಕಂಬ, ಕೃಷಿಗೆ ಹಾನಿಯಾಗಿದ್ದು, ಘಟನಾ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿದರು.

ಸುಬ್ರಹ್ಮಣ್ಯ ಹಾಗೂ ಪಂಜ ಪರಿಸರದಲ್ಲಿ ಗಾಳಿ ಮಳೆಗೆ ಅಪಾರ ಹಾನಿ ಉಂಟಾಗಿದೆ. ಐನೆಕಿದು ಗ್ರಾಮದ ಕೋಟೆ ವಿಜಯ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಏನೆಕಲ್ಲು ಗ್ರಾಮದಲ್ಲಿ ಅಂಗಡಿ ಶೀಟು ಗಾಳಿಗೆ ಹಾರಿ ಹೋಗಿವೆ. ಗ್ರಾ.ಪಂ.ಸಂಜೀವಿನಿ ಕಟ್ಟಡದ ಎದುರಿನ ತಾತ್ಕಾಲಿಕ ತರಕಾರಿ ಅಂಗಡಿ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.

ಪಂಜದ ಕೃಷ್ಣನಗರ ಕೂತ್ಕುಂಜ ಗ್ರಾಮದ ದಾಮೋದರ ಬೆಳ್ಚಪಾಡ ಎಂಬವರ ಮನೆ ಮೇಲೆ ಹಲಸಿನ ಮರದ ರೆಂಬೆ ಬಿದ್ದು ಮನೆ ಜಖಂಗೊಂಡಿದೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಪಂಬೆತ್ತಾಡಿ ಗ್ರಾಮದ ಚಿದಾನಂದ ಅವರ ಮನೆ ಮೇಲೆ ರಬ್ಬರ್‌ ಮರಗಳು ಬಿದ್ದು ಹಾನಿಯಾಗಿದೆ. ಪಂಜ ದೇವಸ್ಥಾನದ ಗರಡಿಬೈಲು ನಾಗನಕಟ್ಟೆಗೆ ಮರ ಬಿದ್ದಿದೆ.

driving

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡ ಹಲವೆಡೆ ಮರಗಳನ್ನು ತೆರವುಗೊಳಿಸಲು ಸಹಕರಿಸಿತು. ಪಂಬೆತ್ತಾಡಿ ಗ್ರಾ.ಪಂ.ಉಪಾಧ್ಯಕ್ಷ ಮಹೇಶ್‌ ಕುಮಾರ್‌ ಕರಿಕ್ಕಳ, ರಜೀತಾ ಭಟ್‌ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರ ಸಹಕಾರದೊಂದಿಗೆ ಮರಗಳ ತೆರವಿಗೆ ನೆರವಾದರು. ವಿದ್ಯುತ್‌ ಕಂಬಗಳಿಗೆ ಹಾನಿಯಾದಲ್ಲಿ ಮೆಸ್ಕಾಂ ಲೈನ್‌ಮೆನ್‌, ಸಿಬ್ಬಂದಿ ಅವಿರತ ಶ್ರಮದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು, ಗ್ರಾ.ಪಂ.ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಂದಾಯ ಇಲಾಖೆಯವರು ಹಾನಿಯ ಲೆಕ್ಕ ಹಾಕುತ್ತಿದ್ದಾರೆ.


ರೆಂಜಿಲಾಡಿ ಗ್ರಾಮದ ಸಾಕೋಟೆ ಜಾಲುತಲೆಕ್ಕಿ ಎಂಬಲ್ಲಿ ಮರಗಳು ಬಿದ್ದು ನಾಲ್ಕು ವಿದ್ಯುತ್‌ ಕಂಬಗಳು ತುಂಡಾಗಿದ್ದು, ವಿದ್ಯುತ್‌ ಸಂಪರ್ಕ ಕಡಿಗೊಂಡಿತ್ತು. ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಲಾಗಿದೆ. ವಿದ್ಯುತ್‌ ಲೈನ್‌ ದುರಸ್ತಿಗೆ ಮೆಸ್ಕಾಂ ಇಲಾಖೆ ಸಿಬ್ಬಂದಿ ಶ್ರಮಿಸಿದರು. ಕಲ್ಲುಗುಡ್ಡೆ ಸಂಪರ್ಕದ ವಿದ್ಯುತ್‌ ಲೈನ್‌ ಮೇಲೆ ಕಡಬ ಭಾಗದ ಹಲವೆಡೆ ಮರಗಳು ಬಿದ್ದು ಹಾನಿಸಂಭವಿಸಿದೆ. ಗುರುವಾರ ಸಂಜೆವರೆಗೂ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು.

- Advertisement -

Related news

error: Content is protected !!