ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ಸಮುದಾಯ ಸೇವೆ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಸುಳ್ಯ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಸಮುದಾಯ ಸೇವೆ ಸಲ್ಲಿಸಿದ್ದ ಯುವಕನೊಬ್ಬ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರತ್ಯೇಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ ಸುಳ್ಯ ನಿವಾಸಿ ರಕ್ಷಿತ್ ಜಿ (29) ಅವರಿಗೆ ಮಾನ್ಯ ನ್ಯಾಯಾಲಯವು 15 ದಿನಗಳ ಸಮುದಾಯ ಸೇವೆ ವಿಧಿಸಿತ್ತು.


ಅದರಂತೆ ಅವರು ಮಾರ್ಚ್ 15ರಂದು ಸುಳ್ಯ ಪಟ್ಟಣದಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಹಾಗೂ ನಿಯಂತ್ರಣ ಕಾರ್ಯದಲ್ಲಿ ಪಾಲ್ಗೊಂಡು ಸಮುದಾಯ ಸೇವೆ ಸಲ್ಲಿಸಿದ್ದರು.ಈ ವೇಳೆ ಸಮುದಾಯ ಸೇವೆ ಸಲ್ಲಿಸಿದ ದೃಶ್ಯಗಳು ಹಾಗೂ ಮಾಹಿತಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ ರಕ್ಷಿತ್ ಜಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರೆಂದು ತಿಳಿದುಬಂದಿದೆ.ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.










