Friday, May 23, 2025
spot_imgspot_img
spot_imgspot_img

ಸುಳ್ಯ: ಕಾಡು ಹಂದಿ ಮಾಂಸ ನೀಡುವುದಾಗಿ ಹಣ ಪಡೆದು ವಂಚನೆ; ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

- Advertisement -
- Advertisement -

ಸುಳ್ಯ: ಕೆಲ ದಿನಗಳ ಹಿಂದೆ ಕಾಡು ಹಂದಿ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಇದೀಗ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸುಳ್ಯದ ಕುಲ್ಕುಂದದಲ್ಲಿ ನಡೆದಿದೆ.

ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ ಹೇಳಿದ್ದ ಎನ್ನಲಾಗಿದ್ದು, ಈ ವೇಳೆ ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರುಕೊಂಡಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಈತ ಕಡಬ ತಾಲೂಕಿನ ಮರ್ದಾಳದ ವ್ಯಕ್ತಿ ಎಂದು ತಿಳಿದು ಬಂದಿದ್ದು ಹಲವರಿಗೆ ವಿವಿಧ ರೀತಿಯಲ್ಲಿ ವಂಚಿಸಿರುವುದು ತಿಳಿದು ಬಂದಿದೆ.

ದೂರು ನೀಡಲು ಯಾರೂ ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಬಿಟ್ಟಿರುವುದಾಗಿ ಸುಬ್ರಹ್ಮಣ್ಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಈತ ಕಟ್ಟಿಗೆ ಇದೆ ಎಂದು ಹೇಳಿ ಕುಲ್ಕುಂದ ಭಾಗದಲ್ಲಿಯೂ ಮುಂಗಡ ಹಣ ಪಡೆದಿದ್ದ ಎನ್ನಲಾಗಿದೆ. ಸದ್ಯ ಈತನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಹಂಚಿಕೊಂಡಿದ್ದು ಮೋಸ ಹೋಗದಂತೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಈತ ಫೆಬ್ರವರಿ ತಿಂಗಳಲ್ಲಿ ಕೆಡ್ಡಸದ ಸಂದರ್ಭ ಎಡಮಂಗಲದಲ್ಲಿ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದು ಹಂದಿ ಮಾಂಸ ಇದೆ, ಬೇಕಾದರೆ ಕೊಡುತ್ತೇನೆ ಎಂದು ಹೇಳಿ ಹಲವರಿಂದ ಹಣ ಪಡೆದು ಹಿರಿಯ ವ್ಯಕ್ತಿಯನ್ನು ಪಾಲೋಲಿ ಸೇತುವೆ ಬಳಿ ಬೈಕ್ ನಿಂದ ಇಳಿಸಿ ಕ್ಷಣಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ ವಂಚಿಸಿದ್ದ. ವಂಚಿಸಿದ ವ್ಯಕ್ತಿ ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು.ಆ ಸಂದರ್ಭದಲ್ಲಿ ಯಾರೂ ಠಾಣೆಗೆ ದೂರು ನೀಡದ ಕಾರಣ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ.

- Advertisement -

Related news

error: Content is protected !!