


ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕೊಳ್ಳೆಮಾರು ನಿವಾಸಿ ಸಾಹಿತ್ಯ ರೈ ಅವರನ್ನು ಅತ್ಯಾಚಾರ ಯತ್ನಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ, ಕಾಮುಕ ಮಾವ ( ಪತಿಯ ತಂದೆ ) ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ನಿತ್ಯಾನಂದ ರೈ ಮತ್ತು ಪತಿ ಯಶಸ್ವಿ ಎನ್ ರೈ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ ಫೆ.3ರಂದು ರಾತ್ರಿ ಘಟನೆ ನಡೆದಿದ್ದು, ತನ್ನ ಪತಿ ಆಸ್ಪತ್ರೆಗೆ ಸೇರಿಸಲು ನಿರಾಕರಿಸಿದ್ದರಿಂದ ರಾತ್ರಿ 11.30ಕ್ಕೆ ಕಾರಿನಲ್ಲಿ ಬಂದ ತಂದೆ- ತಾಯಿ ರಕ್ತಸಿಕ್ತರಾಗಿ ಬಿದ್ದಿದ್ದ ಸಾಹಿತ್ಯರನ್ನು ತಕ್ಷಣ ಕರೆದುಕೊಂಡು ಹೋಗಿ ಸಂಪಾಜೆ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಂಟ್ವಾಳದ ಮಂಚಿಗೆ ಹೋಗುವ ದಾರಿ ಮದ್ಯೆ ಮನೆ ಸಮೀಪ ತಲುಪುತ್ತಲೇ ಉಸಿರಾಟಕ್ಕೆ ತೊಂದರೆಯಾಗಿದ್ದು, ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಹಿತ್ಯ ಅವರನ್ನು ಯಶಸ್ವಿ ಅವರಿಗೆ ದಿನಾಂಕ 21.04.2021 ರಂದು ವಿವಾಹ ಮಾಡಿಕೊಡಲಾಗಿತ್ತು. ಅವರಿಗೆ ಮೂರುವರೆ ವರ್ಷದ ಒಂದು ಗಂಡು ಮಗು ಇದೆ. ತನ್ನ ಗಂಡನ ಮನೆ, ಸಂಪಾಜೆ ಕಲ್ಲುಗುಂಡಿಯಲ್ಲಿ ಸಾಹಿತ್ಯ, ಅವರ ಪತಿ ಯಶಸ್ವಿ, ಮೂರುವರೆ ವರ್ಷದ ಮಗು ಹಾಗೂ ಪತಿಯ ತಂದೆ ನಿತ್ಯಾನಂದ ಸೇರಿ ನಾಲ್ಕು ಜನ ಮಾತ್ರ ವಾಸಿಸುತ್ತಿದ್ದರು. ಸಾಹಿತ್ಯ ಅವರ ವಿವಾಹವಾಗಿ ಸುಮಾರು ಮೂರು ವರ್ಷ ತನಕ ಉತ್ತಮ ರೀತಿಯ ಸಂಬಂಧದಲ್ಲಿ ಇದ್ದಿದ್ದು, ಆದರೆ ಅನಂತರ ಕ್ರಮೇಣವಾಗಿ ಮಾವ ನಿತ್ಯಾನಂದನ ಕಾಮುಕ ದೃಷ್ಠಿ ಸಾಹಿತ್ಯರವರ ಮೇಲೆ ಬಿದ್ದಿತ್ತು. ಹಲವು ಸಲ ಸಾಹಿತ್ಯರವರ ಮೈ ಮೇಲೆ ಮಾವ ಕೈ ಮಾಡಲು ಬಂದಿದ್ದು ಅದನ್ನು ವಿರೋಧಿಸಿದಕ್ಕಾಗಿ ಮಾವನು ನನ್ನ ಪತಿಯಲ್ಲಿ ನೀನು ಅವಳಿಗೆ ವಿಚ್ಛೇದನ ಕೊಡು ನಿನಗೆ ಬೇರೆ ಚಂದದ ಹುಡುಗಿಯನ್ನು ನೋಡಿ ವಿವಾಹ ಮಾಡಿಕೊಡುವುದಾಗಿ ಮಾತ್ರವಲ್ಲದೆ ಕೆಲವೊಮ್ಮೆ ಸಾಹಿತ್ಯರವರ ಗಂಡನಲ್ಲಿ ಅಂದರೆ ಅವರ ಮಗನಲ್ಲಿ ನೀನು ಅವಳನ್ನು ಕೊಲೆ ಮಾಡು ಹೆದರಬೇಡ, ಜೈಲಲ್ಲಿ ಬೇಕಿದ್ದರೆ ನಾನು ಕುಳಿತುಕೊಳ್ಳುತ್ತೇನೆ ಎಂದು ಸಹ ಮಾವ ಪ್ರಚೋದಿಸುತ್ತಲೇ ಇದ್ದಾರೆ ಎಂದು ಭಯಭೀತರಾಗಿ ಸಾಹಿತ್ಯ ತನ್ನ ತಂದೆ ತಾಯಿಯವರಲ್ಲಿ ಹೇಳಿಕೊಂಡಿದ್ದರು. ಆ ಸಮಯ ಸಾಹಿತ್ಯರವರನ್ನು ಸಮಾಧಾನ ಪಡಿಸುತ್ತಿದ್ದ ತಂದೆ ತಾಯಿಯು ನೀನು ಹೇಗಾದರೂ ಸಹಿಸಿಕೊಂಡು ಗಂಡನ ಮನೆಯಲ್ಲಿ ಜೀವನ ನಡೆಸು, ನೀನು ಗಂಡನನ್ನು ಬಿಟ್ಟು ಬಂದರೆ ಅದು ಕುಟುಂಬಕ್ಕೆ ಅವಮಾನ ಎಂದು ಸಾಹಿತ್ಯರವರಿಗೆ ಬುದ್ಧಿ ಮಾತು ಹೇಳುತ್ತಿದ್ದರು. ಅದೇ ರೀತಿ ಸಾಹಿತ್ಯ ಮಾವನ ಕಿರುಕುಳ ಮತ್ತು ಅಸಭ್ಯ ವರ್ತನೆಗಳ ಬಗ್ಗೆ ತನ್ನ ಪತಿಯಲ್ಲಿ ಹೇಳಿಕೊಂಡಾಗ ನೀನು ತಂದೆಯ ಮಾತನ್ನು ಪಾಲಿಸಬೇಕೆಂದು ಪತ್ನಿಗೆ ಜೋರು ಮಾಡಿ ಆಕೆಯ ಬಾಯಿ ಮುಚ್ಚಿಸುತ್ತಿದ್ದರು.

ಪತಿ ಯಶಸ್ವಿ ಎನ್ ರೈ ಸಂಪಾಜೆಪೇಟೆಯಲ್ಲಿ ಆಟೋಮೊಬೈಲ್ ಶಾಪ್ ಅನ್ನು ಹೊಂದಿದ್ದು ಅವರು ಪ್ರತಿದಿನ ರಾತ್ರಿ ಮನೆಗೆ ಬರುವಾಗ ಸುಮಾರು 9:00 ಯಾಗುತ್ತಿತ್ತು. ಫೆ.3ರಂದು ರಾತ್ರಿ ಸಾಹಿತ್ಯರವರ ಗಂಡನು ಬರುವ ಕೆಲವು ಸಮಯಗಳ ಮುಂಚೆ ಸಾಹಿತ್ಯ ತನ್ನ ಕೋಣೆಯಲ್ಲಿ ಬಟ್ಟೆಗಳನ್ನು ಮಡಚುತ್ತಿರುವ ಸಮಯ ಮಾವ ನಿತ್ಯಾನಂದ ಸಾಹಿತ್ಯಳ ಕೋಣೆಗೆ ಅಕ್ರಮ ಪ್ರವೇಶ ಮಾಡಿ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮಂಚಕ್ಕೆ ದೂಡಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದು, ಆ ಸಮಯ ಸಾಹಿತ್ಯ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ರಯತ್ನಿಸಿದಾಗ ಕಾಮುಕ ಮಾವ ಆಕೆಯ ಗಂಟಲಲ್ಲಿ ಅಮುಕಿ ಹಿಡಿದಿದ್ದು ಪರಿಣಾಮವಾಗಿ ಗಂಟಲಿಗೆ ಮತ್ತು ಶರೀರದ ಭಾಗಗಳಿಗೆ ಪರಚಿತ ಗಾಯಗಳಾಗಿರುವುದಾಗಿದೆ ಮತ್ತು ಅದೇ ರೀತಿ ಮತ್ತೆ ಮತ್ತೆ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಕಾಮುಕ ಆಕೆಯ ಮೂಗಿಗೆ ಕಚ್ಚಿ ತೀವ್ರ ಸ್ವರೂಪದ ಗಾಯ ಉಂಟು ಮಾಡಿದ್ದು ಮೂಗಿನ ಗಾಯದಿಂದ ತೀವ್ರ ರಕ್ತ ಸುರಿದು ರೂಮಿನಲ್ಲಿಯೇ ಬಿದ್ದಿದ್ದರು. ಆ ವೇಳೆಗೆ ಆಕೆಯ ಎಳೆಯ ಮಗು ಈ ಕೃತ್ಯವನ್ನು ನೋಡಿ ಜೋರಾಗಿ ಕೂಗಿದ ಸಮಯ ಮಾವ ಮಗುವನ್ನು ಸಮಾಧಾನ ಪಡಿಸುವ ಸಲುವಾಗಿ ಮೇಲೆದ್ದಾಗ ಆಕೆ ಅಲ್ಲಿಂದ ತಪ್ಪಿಸಿ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆ ಸಮಯ ಈ ದಿನ ನೀನು ಹೇಗೆ ತಪ್ಪಿಸಿಕೊಳ್ಳುತ್ತಿ ನೋಡುತ್ತೇನೆ ಮತ್ತು ನೀನು ಈ ಬಗ್ಗೆ ಹೊರಗೆ ಈ ವಿಷಯವನ್ನು ತಿಳಿಸಿದರೆ ನಿನ್ನನ್ನು ಕೊಲೆ ನಡೆಸದೆ ಬಿಡುವುದಿಲ್ಲ ಎಂದು ಮಾವ ಜೀವ ಬೆದರಿಕೆ ಹಾಕಿದಾಗ ನಿರ್ವಾಹವಿಲ್ಲದೆ ಮಗು ಮತ್ತು ಸಾಹಿತ್ಯ ಜೋರಾಗಿ ಕೂಗಿ ಬೊಬ್ಬೆ ಹಾಕಿದಾಗ ಮಗುವಿನತ್ತ ಹೋದ ಮಾವನ ಕಣ್ತಪ್ಪಿಸಿ ಸಾಹಿತ್ಯ ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಸಮಯ ಗಂಡನು ಮನೆಗೆ ಬಂದಿದ್ದು, ಹೊರಗಡೆ ವಿಚಾರವನ್ನು ಪತಿಯಲ್ಲಿ ತಿಳಿಸಿದಾಗ ಅವರು ತಂದೆಯ ಪರವಾಗಿ ಮಾತನಾಡಿ ನೀನು ಮನೆಯಿಂದ ಹೊರಗೆ ಯಾಕೆ ಬಂದಿದ್ದು ಎಂದು ಹೇಳಿ ಯಾವುದನ್ನೂ ಕೇಳಿಸಿಕೊಳ್ಳದೆ ಸಾಹಿತ್ಯಾಳಿಗೆ ಹಿಗ್ಗಾ ಮುಗ್ಗಾ ಬೈದಿದ್ದಾನೆ. ನಿಮ್ಮ ತಂದೆಯಿಂದ ಹಲ್ಲೆಗೊಳಗಾಗಿ ತನ್ನ ಮೂಗಿನಿಂದ ರಕ್ತ ಸುರಿಯುತ್ತಿದ್ದು, ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಿ ಎಂದು ಪತಿಯಲ್ಲಿ ಅತ್ತು ಗೋಗರೆದಾಗ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಲು ನಿರಾಕರಿಸಿ, ನೀನು ಇಲ್ಲೇ ಸತ್ತುಹೋಗು ಎಂದು ಪತ್ನಿಗೆ ಹೇಳಿದ್ದಾನೆ. ಅನ್ಯ ಮಾರ್ಗವಿಲ್ಲದೆ ಮನೆಗೆ ಫೋನು ಮಾಡಿ ಪೊಷಕರಿಗೆ ಸಾಹಿತ್ಯ ವಿಷಯವನ್ನು ತಿಳಿಸಿದ್ದಾರೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಹಿತ್ಯ ಪ್ರಕರಣದ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ZERO FIR NO 01/2026 ಕಲಂ:85, 74, 115(2), 117(2), 351(2) ಜೊತೆಗೆ 3(5)BNS ನಂತೆ ಪ್ರಕರಣ ದಾಖಲಿಸಿಕೊಂಡು, ಘಟನಾ ಸ್ಥಳದ ಆಧಾರದಲ್ಲಿ ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿ ತನಿಖೆ ನಡೆಸಲಾಗುತ್ತಿದೆ.








