ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಳ್ಳುತ್ತಿದೆ. ತನಿಖೆಗೆ ತೆರಳಿದ ಬಿಹಾರದ ಐಪಿಎಸ್ ಅಧಿಕಾರಿಯನ್ನು ಮಹಾರಾಷ್ಟ್ರ ಸರ್ಕಾರ ಬಲವಂತವಾಗಿ ಕ್ವಾರಂಟೈನ್ ಗೆ ಒಳಪಡಿಸಿದ ಬಳಿಕ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಬಿಹಾರ ಅಸೆಂಬ್ಲಿಯಲ್ಲಿ ಸುಶಾಂತ್ ಸಿಂಗ್ ಕೇಸ್ ಪ್ರತಿಧ್ವನಿಸಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಮಹಾರಾಷ್ಟ್ರ ಸರ್ಕಾರ ನೀಡಬೇಕು ಎಂಬ ಒಕ್ಕೊರಲ ಆಗ್ರಹ ಕೇಳಿ ಬಂದಿದೆ.
ಸುಶಾಂತ್ ಸಿಂಗ್ ಸಂಬಂಧಿ , ಬಿಜೆಪಿ ಶಾಸಕ ನೀರಜ್ ಕುಮಾರ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಬಿಜೆಪಿ ಧ್ವನಿಗೆ ಆರ್ ಜೆಡಿ ಕೂಡ ಧ್ವನಿಗೂಡಿಸಿದೆ. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜೂನ್ 14 ರಂದು ಮುಂಬೈನ ಅಪಾರ್ಟ್ಮೆಂಟ್ ವೊಂದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ಮಹಾರಾಷ್ಟ್ರ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದ್ದಾರೆ.