Monday, July 20, 2026
spot_imgspot_img
spot_imgspot_img

ಮನೆಯ ಮೇಲ್ಛಾವಣಿಯಲ್ಲಿ ಭೀಕರ ಸ್ಫೋಟ- ಚಿಕಿತ್ಸೆ ವೇಳೆ ತಾಯಿ–ಮಗ ಮೃತ್ಯು- ಅಕ್ರಮ ಬಾಂಬ್ ತಯಾರಿಕಾ ಶಂಕೆ- ಎನ್ಐಎ ತನಿಖೆ ಆರಂಭ

- Advertisement -
- Advertisement -

ಭುವನೇಶ್ವರ: ಒಡಿಶಾ ರಾಜಧಾನಿ ಭುವನೇಶ್ವರದ ಸುಂದರಪಾದ ಪ್ರದೇಶದಲ್ಲಿ ಜ. 27ರಂದು ಸಂಭವಿಸಿದ ಭೀಕರ ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಘಟನೆಯ ತೀವ್ರತೆಯನ್ನು ಅನಾವರಣಗೊಳಿಸಿವೆ. ಸ್ಫೋಟದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಒಬ್ಬ ಮಹಿಳೆ ಮತ್ತು ಅವರ ಪುತ್ರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಸತಿ ಕಟ್ಟಡದ ಮೇಲ್ಛಾವಣಿಯಲ್ಲಿ ಅಳವಡಿಸಿದ್ದ ನೀರಿನ ಟ್ಯಾಂಕ್ ಗಳ ಹಿಂದಿನಿಂದ ಹಠಾತ್ ಜ್ವಾಲೆಗಳು ಎದ್ದು ದಟ್ಟ ಹೊಗೆ ಆಕಾಶಕ್ಕೇರಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಸ್ಫೋಟದ ಆಘಾತದಿಂದ ಸುತ್ತಮುತ್ತಲಿನ ಮನೆಗಳಲ್ಲಿ ದೊಡ್ಡ ಮಟ್ಟದ ಕಂಪನವುಂಟಾಗಿದೆ. ಕಿವಿಗವುಚುವ ಶಬ್ದ ಕೇಳುತ್ತಿದ್ದಂತೆಯೇ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದರು ಎನ್ನಲಾಗಿದೆ.

ಮನೆಯ ಛಾವಣಿಯಲ್ಲಿ ಸ್ಫೋಟಕ ವಸ್ತುಗಳನ್ನು ನಿರ್ವಹಿಸುವ ವೇಳೆ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಾಯಗೊಂಡ ನಾಲ್ವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಚಿಕಿತ್ಸೆ ಬಳಿಕ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ರಮ ಬಾಂಬ್ ತಯಾರಿಕಾ ಶಂಕೆ

ಈ ಪ್ರಕರಣದಲ್ಲಿ ಶಹನವಾಝ್ ಮಲಿಕ್ ನನ್ನು ಪ್ರಮುಖ ಆರೋಪಿಯಾಗಿ ಗುರುತಿಸಿರುವ ಭುವನೇಶ್ವರ ಉಪ ಪೊಲೀಸ್ ಆಯುಕ್ತರು, ಅಕ್ರಮ ಬಾಂಬ್ ತಯಾರಿಕೆಯ ಶಂಕೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಹನವಾಝ್ ಮಲಿಕ್, ಆತನ ತಾಯಿ ಅಮಿಯಾ ಮಲಿಕ್, ಹಾಗೂ ಮತ್ತೊಬ್ಬ ವ್ಯಕ್ತಿ ಮನೆಯಲ್ಲಿ ಸ್ಫೋಟಕ ಸಾಧನ ತಯಾರಿಕೆಯಲ್ಲಿ ತೊಡಗಿಕೊಂಡಿದ್ದರೆಂಬ ಸುಳಿವುಗಳು ಲಭಿಸಿವೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಗನ್ ಪೌಡರ್ ವಶಪಡಿಸಿಕೊಳ್ಳಲಾಗಿದ್ದು, ಬಾಂಬ್ ತಯಾರಿಕಾ ಚಟುವಟಿಕೆ ನಡೆದಿರುವ ಶಂಕೆ ಮತ್ತಷ್ಟು ಬಲಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

“ಗಾಯಗೊಂಡ ಪ್ರಮುಖ ವ್ಯಕ್ತಿಗೆ ಈ ಹಿಂದೆ ಕ್ರಿಮಿನಲ್ ದಾಖಲೆ ಇತ್ತು. ಅವರು ಯಾವುದೋ ರೀತಿಯ ಅಪರಾಧ ಚಟುವಟಿಕೆಗೆ ಸಂಚು ರೂಪಿಸುತ್ತಿದ್ದರೆಂಬ ಅನುಮಾನವಿದೆ. ಸ್ಫೋಟಕಗಳನ್ನು ತಯಾರಿಸುವ ವೇಳೆಯಲ್ಲಿಯೇ ಸ್ಫೋಟ ಸಂಭವಿಸಿದೆ,” ಎಂದು ಡಿಸಿಪಿ ಜಗಮೋಹನ್ ಮೀನಾ ತಿಳಿಸಿದ್ದಾರೆ. ಸಂಗ್ರಹಿಸಿದ ಸ್ಫೋಟಕ ವಸ್ತುಗಳ ಬಗ್ಗೆ ಹೆಚ್ಚಿನ ಶೋಧ ಹಾಗೂ ಪರೀಕ್ಷೆ ನಡೆಯಲಿದೆ ಎಂದೂ ಹೇಳಿದ್ದಾರೆ.

ಶಹನವಾಝ್ ಮಲಿಕ್ ವಿರುದ್ಧ ಹಿಂದಿನ ಪ್ರಕರಣಗಳೂ ದಾಖಲಾಗಿವೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ವಿವರವಾದ ತನಿಖೆ ಆರಂಭಿಸಿದೆ. ಕೇಂದ್ರ ಸಂಸ್ಥೆ ಮಧ್ಯಪ್ರವೇಶಿಸುವ ಮೊದಲು ಸ್ಥಳೀಯ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.

ಸ್ಫೋಟದ ನಿಖರ ಕಾರಣ ಪತ್ತೆಹಚ್ಚಲು ಹಾಗೂ ಇದರ ಹಿಂದೆ ಯಾವುದೇ ದೊಡ್ಡ ಪಿತೂರಿ ಇದೆಯೇ ಎಂಬುದರ ಕುರಿತು ಮಾಹಿತಿ ಕಲೆಹಾಕಲು ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿದ್ದಾರೆ. ವಿಧಿವಿಜ್ಞಾನ ಸಾಕ್ಷ್ಯ ಸಂಗ್ರಹವೂ ನಡೆಯುತ್ತಿದ್ದು, ಸುಂದರಪಾದ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

- Advertisement -

Related news

error: Content is protected !!