


ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ-ಮಾಣಿ ವಲಯದ ಇಡ್ಕಿದು, ಕುಳ, ಅಳಕೆಮಜಲು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಪ್ಪಿನಂಗಡಿ ಪಶುವೈದ್ಯರಾದ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಸಂಘಟಿಸಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ-2ರ ನಿರ್ದೇಶಕರಾದ ಬಾಬು ನಾಯ್ಕ ಮಾತನಾಡಿ, ಯೋಜನೆ ಬೆಳೆದು ಬಂದ ದಾರಿ, ಪದಾಧಿಕಾರಿಗಳ ಜವಾಬ್ದಾರಿ ಕುರಿತು ವಿವರಿಸಿ, ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಪ್ರಗತಿನಿಧಿ ನೀಡಿ ಕುಟುಂಬದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಪಶುವೈದ್ಯರಾದ ಮಂದಾರ ಜೈನ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನುಷ್ಠಾನಗೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳು ಶಿಸ್ತಿನಿಂದ ಪಾರದರ್ಶಕವಾಗಿ ನಡೆಯುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅಭಿವೃದ್ಧಿ ಸಾಧಿಸಬೇಕು ಎಂಬುದು ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಸಂಘದ ಸದಸ್ಯರು ಪಡೆದ ಸಾಲವನ್ನು ಸದ್ವಿನಿಯೋಗ ಮಾಡಿ ಸಮರ್ಪಕವಾಗಿ ಮರುಪಾವತಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಭಟ್, ಜನಜಾಗೃತಿ ವೇದಿಕೆ ಸದಸ್ಯರಾದ ಸುರೇಶ್ ಮುಕ್ಕುಡ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ವಿಟ್ಲ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಮಾತನಾಡಿ, ಯೋಜನೆಯ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂದರು. ಮಾಣಿ ವಲಯಾಧ್ಯಕ್ಷರಾದ ಸುಧಾಕರ ಸಪಲ್ಯ ಉಪಸ್ಥಿತರಿದ್ದರು.
ಅಳಕೆಮಜಲು ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಇಡ್ಕಿದು ಒಕ್ಕೂಟದ ನೂತನ ಅಧ್ಯಕ್ಷರಾದ ಜಯಕರ ಅಮೈ ಸಹಕಾರ ಯಾಚಿಸಿದರು.

ಅಳಕೆಮಜಲು ಸೇವಾ ಪ್ರತಿನಿಧಿ ಸುಗಂಧಿನಿ ವರದಿ ವಾಚಿಸಿದರು. ಮಾಣಿ ವಲಯ ಮೇಲ್ವಿಚಾರಕಿ ಆಶಾ ಪಾರ್ವತಿ ಸ್ವಾಗತಿಸಿ, ಕೇಶವ ಗೌಡ ವಂದಿಸಿದರು. ಉದಯ ಕಾರ್ಯಕ್ರಮ ನಿರೂಪಿಸಿದರು. ಇಡ್ಕಿದು, ಕುಳ ಒಕ್ಕೂಟದ ಸೇವಾ ಪ್ರತಿನಿಧಿಗಳಾದ ಪುಷ್ಪಲತಾ, ಯೋಗಿತಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.








