




ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ (ಮೇ.19) ವಾಯುವ್ಯ ಇರಾನ್‌ನ ಜೋಲ್ಫಾದಲ್ಲಿ ಪತನವಾಗಿದೆ. ಪ್ರತಿಕೂಲ ಹವಾಮಾನ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಅಧ್ಯಕ್ಷ ರೈಸಿ ಜತೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಹೆಲಿಕಾಪ್ಟರ್ ಅಪಘಾತವಾದ ಸ್ಥಳಕ್ಕೆ, ರಕ್ಷಣಾ ಪಡೆ ಹೆಲಿಕಾಪ್ಟರ್ ಇರುವ ಜಾಗವನ್ನು ತಲುಪಲು ಹರಸಾಹಸ ಪಡುತ್ತಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಟೆಹ್ರಾನ್‌ನಿಂದ ಸುಮಾರು 600 ಕಿಮೀ ದೂರದ ಪೂರ್ವ ಅಜರ್‌ಬೈಜಾನ್‌ನ ಜೋಲ್ಫಾದಲ್ಲಿ ಅಧ್ಯಕ್ಷರನ್ನು ಹೊತ್ತ ಹೆಲಿಕಾಪ್ಟರ್ ಹಾರ್ಡ್ ಲ್ಯಾಂಡಿಂಗ್ ಮಾಡಿದೆ ಎಂದು ಇರಾನ್‌ನ ಆಂತರಿಕ ಸಚಿವ ಅಹ್ಮದ್ ವಾಹಿದಿ ದೃಢಪಡಿಸಿದ್ದಾರೆ.
ದಟ್ಟ ಮಂಜು ಆವರಿಸಿರುವುದರಿಂದ ಹೆಲಿಕಾಪ್ಟರ್ ಅವಘಡದ ಶಂಕೆ ವ್ಯಕ್ತವಾಗಿದ್ದು, ಇರಾನ್ ನಾಯಕರ ಜೀವಕ್ಕೆ ಕುತ್ತು ಉಂಟಾಗಿರುವ ಆತಂಕ ಎದುರಾಗಿದೆ. ಈ ಹಿನ್ನಲೆ ಭೂಮಾರ್ಗದ ಮೂಲಕ ತಲುಪಿ ಕಾರ್ಯಾಚರಣೆ ನಡೆಸಲು ತೀರ್ಮಾನ ಮಾಡಲಾಗಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿರುವ ವಿಷಯ ತಿಳಿದು ಪ್ರಧಾನಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇಬ್ರಾಹಿಂ ರೈಸಿ ಅವರು ಸುರಕ್ಷಿತವಾಗಿ ಬರಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.