Monday, April 29, 2024
spot_imgspot_img
spot_imgspot_img

ಜೀವನ ನೌಕೆ ಆ ದೇವರ ಬಳುವಳಿ…

- Advertisement -G L Acharya panikkar
- Advertisement -

ಬಾಳು ಬಲು ದೊಡ್ಡದು. ಅದ ನಡೆಸಲು ದೇವರು ನಮಗೆ ತರಬೇತಿ ಕೊಡುತ್ತಾನೆ, ಕೊಟ್ಟಿದ್ದಾನೆ. ಪಡೆದುಕೊಳ್ಳುವ ಹಂತದಲ್ಲಿ ಹಲವು ವ್ಯತ್ಯಾಸಗಳು ಎದುರಾಗುತ್ತವೆ. ಉತ್ತಮ ಸಂಸ್ಕಾರದ ತಿರುಳು ಮನದೊಳಗೆ ಇದ್ದರೆ ಮನೆ ಬೆಳಗಿ ಪ್ರಕಾಶಿಸುತ್ತದೆ. ಪ್ರಪಂಚವನ್ನು ಬೆಳಗುವ ಸೂರ್ಯ, ಚಂದ್ರರು ಎಂದೂ ಕೇಡು ಬಯಸಿದ್ದಿಲ್ಲ.ಅಕ್ಕಪಕ್ಕದ ಮನೆಯವರಿಗೆ ಬೆಳಕು ಬೇಡವೆoದರೆ ನೀಡದೇ ಇರುವುದಿಲ್ಲ. ಈ ಜಗದಲ್ಲಿರುವ ಎಲ್ಲರೂ ಸಮಾನರು. ಹಾಗೇ ಬದುಕಲು ಪಣ ತೊಡಬೇಕು.

ಹೊನ್ನು ಇದ್ದರೆ ಎಲ್ಲವೂ ಸಿಗುತ್ತದೆ. ಮರದಿಂದ ಹಣ್ಣು ಸಿಗಲು ಮಣ್ಣು ಬೇಕು. ಪ್ರಪಂಚದಲ್ಲಿ ಚೆನ್ನಾಗಿ ಬಾಳಲು ತಾಯಿ ಹೃದಯ ಬೇಕು. ನಿತ್ಯವೂ ಕಾರ್ಯಗಳನ್ನು ಮಾಡಿ ದೇಹ ದಂಡಿಸಿ ಉತ್ತಮ ಫಲ ನಿರೀಕ್ಷೆಯಲ್ಲಿ ಕಾಯುವ ಮನಸ್ಸಿಗೆ ನೆಮ್ಮದಿ ದೊರಕಬೇಕು. ಆಗಲೇ ಎಲ್ಲ ದೊರಕಿದ ಫಲಗಳನ್ನು ಸದುಪಯೋಗ ಮಾಡಲು ಸಾಧ್ಯವಾಗುತ್ತದೆ. ಡಿ ವಿ ಜಿ ಯವರು ಹೇಳಿದಂತೆ ನಾವು ಸೇವಿಸುವ ಅನ್ನವನ್ನು ಬೇಯಿಸುವಂತಹ ನೀರು ನಮ್ಮ ದುಡಿಮೆಯ ಬೆವರಿನ ಫಲವೇ ಆಗಿರಬೇಕೇ ಹೊರತು ಬೇರೆಯವರ ಕಣ್ಣೀರಾಗಿರಬಾರದು. ಇನ್ನೊಬ್ಬರಿಗೆ ಕಷ್ಟ, ನೋವು ಕೊಟ್ಟು ಅದರಿಂದ ದೊರಕಿದ ಅರ್ಥದಿಂದ ಹಸಿವು ನೀಗಲಾರದು. ಅದು ಇನ್ನಷ್ಟು ದಾಹವನ್ನು ಹೆಚ್ಚಿಸುತ್ತ ಹೋಗುತ್ತದೆ. ತೃಪ್ತಿ ಎಂಬ ಮಾತು ಅಲ್ಲಿ ಮೂಕವಾಗಿ ರೋದಿಸುತ್ತದೆ. ಆ ರೋದನ ಇನ್ನಷ್ಟು ಅಂತಹುದೇ ಕಾರ್ಯಗಳನ್ನು ಪ್ರೇರೇಪಿಸುತ್ತದೆ. ಕೊನೆಯಲ್ಲಿ ಬದುಕು ಏನನ್ನೂ ಸಾಧಿಸದೇ ನಿರರ್ಥಕವಾಗುತ್ತದೆ. ಇನ್ನೊಬ್ಬರನ್ನು ತಿವಿದು ಬದುಕಬಾರದು.

ಎಲ್ಲಿ ಕೃತಕ ಆಕರ್ಷಣೆಗಳಿಗೆ ಮರುಳಾಗಿ ಮನಸ್ಸು ಅದನ್ನೇ ಮತ್ತೆ ಮತ್ತೆ ಬಯಸುವುದೋ ಅಲ್ಲಿ ಪ್ರಕೃತಿಯ ಮೇಲೆ ಇನ್ನಷ್ಟು ಪ್ರತಿರೋಧ ಒಡ್ದುತ್ತಿದ್ದೇವೆ ಎಂದೇ ಅರ್ಥ. ಈಗೀಗ ಸಹನೆ ಎಂಬುದು ಮನುಷ್ಯರಿಗೆ ಇಲ್ಲವಾಗಿದೆ. ಅಸಹನೆಯ ಕಾರ್ಯಗಳನ್ನೇ ಮಾಡುತ್ತಾ ಈ ಪ್ರಕೃತಿಯ ಹಾಗೂ ಭೂಮಿತಾಯಿಯ ಸಹನೆಯ ಶಕ್ತಿಯನ್ನು ಪರೀಕ್ಷಿಸುತ್ತಾ ಅಟ್ಟಹಾಸದಿಂದ ವರ್ತಿಸುತ್ತಿದ್ದೇವೆ. ಬೆಟ್ಟ ಗುಡ್ಡಗಳು, ಹಳ್ಳ ಕೊಳ್ಳಗಳು ಜೀವರಾಶಿಗಳಿಗೆ ಅಗತ್ಯವಿದೆ ಎಂಬ ಕನಿಷ್ಠ ಕಲ್ಪನೆಯೂ ಬಾರದ ವಿಷ ಜಂತುಗಳಂತೆ ವರ್ತಿಸುವ ಪರಿ ಎಲ್ಲಿಗೆ ತಲುಪಿಸುವುದೋ ಅರಿಯದಾಗಿದೆ. ಮಣ್ಣನ್ನು ಪೂಜಿಸುವುದು ಮರೆತೇ ಹೋಗಿದೆ. ಅದನ್ನು ಹಣೆಗೆ ತಿಲಕವಾಗಿರಿಸಿಕೊಂಡಾಗ ಮಾತ್ರ ಭೂಮಿ ತಾಯಿಯ ಋಣವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆಗೊಳಿಸಬಹುದೇನೋ. ಸಸ್ಯ ಶೃಂಗಾರ ಮಾನವ ಬದುಕನ್ನು ಅರಳಿಸುತ್ತದೆ. ಹಾಗೆಯೇ ಆಯಾಸಗೊಂಡ ಜೀವಕ್ಕೆ ಅಮೃತದಂತೆ ಚೇತೋಹಾರಿಯಾಗುತ್ತದೆ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದಾದರೆ ಮನಸ್ಸು ಬಹಳ ಪ್ರಾಮುಖ್ಯ ವಹಿಸುತ್ತದೆ. ಹತ್ತಿದ ಮರವನ್ನು ಅರ್ಧಕ್ಕೆ ಬಿಟ್ಟು ಪುನಃ ತಿರುಗಿ ಇಳಿದು ಬಂದರೆ ಏನು ಮಾಡಬೇಕೆಂದು ಆ ಮರವನ್ನು ಹತ್ತಿರುತ್ತೇವೆಯೋ ಆ ಕಾರ್ಯ ಈಡೇರುವುದಿಲ್ಲ. ಆಗ ಏನೂ ಫಲವೂ ಲಭಿಸದು. ಮಾಡುವ ಕೆಲಸ ಜೀವನದ ಸದುದ್ದೇಶವನ್ನು ಸಾರಿ ಹೇಳುವಂತಿರಬೇಕು. ಆಗ ಮಾತ್ರ ನೆಲೆಗೊಳ್ಳುವ ಬದುಕು ಮುಂದಕ್ಕೆ ಒಳ್ಳೆಯ ಸಮಾಜವನ್ನು ರೂಪಿಸಬಹುದಾಗಿದೆ. ನಿತ್ಯವೂ ಕಂಡು ಕೇಳರಿಯದ ಹೊಸ ಆಯಾಮಗಳು ಯೋಚನೆಗೆ ನಿಲುಕದವುಗಳಾಗಿರುತ್ತವೆ.

ಮನೆಯಲ್ಲಿ ನಿತ್ಯವೂ ಉತ್ತಮ ಕರ್ಮಗಳನ್ನು ಮಾಡಬೇಕು. ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಕಲಿಯದವರು ಎಷ್ಟೇ ವಿದ್ಯೆ ಗಳಿಸಿದರೂ ಪ್ರಯೋಜನವಿಲ್ಲ. ಎಷ್ಟೇ ಉನ್ನತ ಹುದ್ದೆ ಇರಲಿ ಸಂಸ್ಕಾರವೆಂಬುದು ಬದುಕನ್ನು ಒಂದು ಶಿಷ್ಟ ಬದ್ಧವಾಗಿ ರೂಪಿಸಲು ಸಾಧ್ಯವಾಗುತ್ತದೆ. ಅಲ್ಲದೇ ದಿನ ದಿನವೂ ಬೆಳೆಯಲು ಆದರ್ಶದ ನಡೆ ನುಡಿಗಳು ಅಗತ್ಯವಿದೆ. ಹಲವು ಪದವಿಗಳ ಹೊತ್ತು ಮೆರೆಯುವವರು ತಮ್ಮ ಮೂಲ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ತೋರಿಕೆಯ ವಸ್ತುಗಳಂತಾಗಬಾರದು. ನೈಜತೆ ಅವರ ಹಾವ ಭಾವದಲ್ಲಿ ವ್ಯಕ್ತವಾಗಬೇಕು. ಬದುಕು ಎತ್ತಲಿಂದ ಎತ್ತಲೋ ಚಲಿಸುತ್ತದೆ. ಗಾಳಿ ಬಂದ ಕಡೆ ತೂರಿಕೋ ಎಂಬಂತೆ ಆದರೂ ಮೂಲದ ನೆಲೆಯೇ ನಮಗೆ ಭದ್ರತೆಯ ಬುನಾದಿಯೆoಬುದನ್ನು ಮರೆಯಬಾರದು. ಹೊಸ ನೀರು ಬಂದಾಗ ಹಳೆಯದೆಲ್ಲ ಕೊಚ್ಚಿ ಹೋಗುವಂತೆ ಕಂಡರೂ ಅದು ಮೇಲೆ ಉದ್ಭವಿಸಿದ ಅಥವಾ ತೇಲುವ ತುಣುಕುಗಳನ್ನು ಕಿತ್ತೆಸೆಯುತ್ತದೆಯೇ ಹೊರತು ಹೊಳೆಯ ಆಕಾರವನ್ನಲ್ಲ ಅಥವಾ ಯಾವುದೇ ಪಾತ್ರವನ್ನಲ್ಲ.

ಎಷ್ಟೇ ಕೆಲಸ ಕಾರ್ಯಗಳು ಇದ್ದರೂ, ಎಡೆಬಿಡದ ಅವೇಳೆಯಾದರೂ ನಮ್ಮೊಳಗಿನ ಅಂತರಾತ್ಮನ ನೆನಪು ಅರಿವಿಗೆ ಬಾರದಿರಲು ಸಾಧ್ಯವಿಲ್ಲ. ಅರಿವಿಗೆ ಬರುವಂತೆ ಜೀವನವನ್ನು ಅನುಗೊಳಿಸಬೇಕು. ಅರಿವಿಗೆ ಬಂದಿಲ್ಲವೆಂದಾದರೆ ಅವರು ಜೀವ ತುಂಬಿಕೊಂಡವರಲ್ಲವೆಂದೇ ಹೇಳಬಹುದು. ಅಥವಾ ಜೀವ ಇದ್ದೂ ಸತ್ತಂತೆ. ಮೂಗು ಬಾಯಿ ಮುಚ್ಚಿ ಒಂದು ಹತ್ತು ನಿಮಿಷ ಕುಳಿತುಕೊಳ್ಳಲು ಸಾಧ್ಯವಾಗದು. ಆ ಉಸಿರಾಟಕ್ಕೆ ಎಷ್ಟು ಮಹತ್ವವಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಉಸಿರಾಟಕ್ಕೆ ಪ್ರಾಮುಖ್ಯತೆ ನೀಡುವವರು ಆ ದೇವರಿದ್ದಾನೆ ಎಂದು ಒಪ್ಪಲೇಬೇಕು. ಹಾಗಿದ್ದಾಗ ನಮ್ಮ ಒಳಗೇ ಇರುವ ದೇವರು ಎಲ್ಲವನ್ನೂ ಸಮಾನತೆಯಿಂದ ಕಾಣಬೇಕು. ಆದರೆ ಮಾನವರೆಲ್ಲ ತಮ್ಮ ಜಾತಿ, ಧರ್ಮ ಎಂದು ಕಲಹಗಳನ್ನು ಏರ್ಪಡಿಸುವುದು ಎಷ್ಟು ಸರಿ? ಶ್ರೀ ರಾಮ ಕೃಷ್ಣ ವಿಷ್ಣು ಬುದ್ಧ ಯೇಸು ಅಲ್ಲ ಈ ಎಲ್ಲಾ ಅವತಾರಗಳಿಂದ ಪವಿತ್ರವಾದ ಭಾರತ ಮಾತೆಯ ಮಡಿಲಲ್ಲಿ ಅವತರಿಸಿ ಧರ್ಮ ಸಂಸ್ಥಾಪನೆ ಮಾಡಿದ ಪುಣ್ಯದಿಂದ ಇಡೀ ವಿಶ್ವವೇ ಕೈ ಮುಗಿದು ತಲೆ ಬಾಗಿ ನಮಸ್ಕರಿಸುತ್ತದೆ. ಪ್ರತೀ ಭಾರತೀಯನೂ ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು. ಅದು ಬಯಸದೇ ಬಂದ ಭಾಗ್ಯವೇ ಆಗಿದೆ . ಆ ಭಾಗ್ಯವನ್ನು ತೊರೆಯದೇ ಬದುಕು ನಡೆಸಲು ಪಣ ತೊಡಬೇಕು.

ದೇವರು ನಮ್ಮ ಉಸಿರಿನೊಳಗಿದ್ದುಕೊಂಡು ಅಂತರಂಗದ ಗುಡಿಯಲ್ಲಿ ಪ್ರಬೇಧ್ಯನಾಗಿರುತ್ತಾನೆ. ಹೇಗೆಂದರೆ ಹನುಮನ ಎದೆಯಲ್ಲಿ ಶ್ರೀ ರಾಮನಿದ್ದಂತೆ. ಅಂತಹ ಭಕ್ತಿ ನಮ್ಮನ್ನು ದೇವರ ಭಕ್ತನನ್ನಾಗಿ ಮಾಡಿಸುತ್ತದೆ. ಬೇರೆ ಅಷ್ಟೈಶ್ವರ್ಯಗಳು ಇರುತ್ತವೋ ಇಲ್ಲವೋ ಅದು ಗಣನೆಗೆ ಬರುವುದಿಲ್ಲ. ಭಕ್ತಿಯ ಪರಾಕಾಷ್ಟೆಗೆ ದೇವರ ಅನುಗ್ರಹ ಸಿಕ್ಕೇ ಸಿಗುತ್ತದೆ. ಸಮಯ ಕಳೆದುದರ ಅರಿವು ಆಗುವುದಿಲ್ಲ. ಅರಿವು ಆದಾಗ ಸಮಯ ಸಿಗುವುದಿಲ್ಲ. ಹಾಗಾಗಬಾರದು. ಮನುಷ್ಯ ಮನುಷ್ಯರಲ್ಲಿ ಗೌರವ ಭಾವ ಇಟ್ಟುಕೊಳ್ಳಬೇಕು. ಆಗಲೇ ಜೀವನ ನೌಕೆ ತೆರೆಗಳ ಹೊಡೆತಕ್ಕೆ ನಲುಗದೇ ಮುಂದೆ ಸಾಗಲು ಸಾಧ್ಯವಾಗುವುದು. ಈ ಜೀವನ ನೌಕೆ ಆ ದೇವರ ಬಳುವಳಿ. ಹಾಗಾಗಿ ಯಾರಿಗೂ ಮತ್ತೊಬ್ಬರ ಜೀವವನ್ನು ಕಸಿದು ಕೊಳ್ಳುವ ಹಕ್ಕು ಇಲ್ಲ.

✍️ಮಲ್ಲಿಕಾ ಜೆ ರೈ ಗುಂಡ್ಯಡ್ಕ
ಅಂಕಣಗಾರರು, ತುಳು ಕನ್ನಡ ಕವಯಿತ್ರಿ
“ಧನ್ ರಾಮ”
ಮುಕ್ರಂಪಾಡಿ
ದರ್ಬೆ ಪುತ್ತೂರು. ದ ಕ. 574202

- Advertisement -

Related news

error: Content is protected !!