Friday, May 3, 2024
spot_imgspot_img
spot_imgspot_img

ಹಲ್ಲಿನ ರಕ್ಷಣೆಗೆ ಹತ್ತು ಹಲವು ಮಾರ್ಗಗಳು ಮತ್ತು ಸೂತ್ರಗಳು:

- Advertisement -G L Acharya panikkar
- Advertisement -

ನೈಸರ್ಗಿಕ ಹಲ್ಲನ್ನು ಉಳಿಸಿಕೊಳ್ಳಲು ಕೆಲವೊಂದು ಕ್ರಮಗಳನ್ನು ಚಾಚೂತಪ್ಪದೆ ಅನುಸರಿಸಬೇಕು. ಹಲ್ಲುಗಳನ್ನು ಕಡೇ ಪಕ್ಷ ದಿನಕ್ಕೆರಡು ಬಾರಿ ಬ್ರಶ್ ಮಾಡಿ. ಬ್ರಶ್ ಮಾಡಬೇಕಾದ ಕನಿಷ್ಠ ಅವಧಿ ಎರಡು ನಿಮಿಷ. ಸರಿಯಾದ ಕ್ರಮದಲ್ಲಿ ಬ್ರಶ್ ಮಾಡುವುದು ಅತೀ ಅವಶ್ಯಕ. ಗೊತ್ತಿಲ್ಲದಿದ್ದರೆ ಸಮೀಪದ ದಂತ ವೈದ್ಯರಲ್ಲಿ ವಿಚಾರಿಸಿ. ಊಟ ತಿಂಡಿಯ ಬಳಿಕ ಬ್ರಶ್ ಮಾಡಿದರೆ ಒಳ್ಳೆಯದು. ಸಾಧ್ಯವಾಗದಿದ್ದಲ್ಲಿ ರಾತ್ರಿಯಂತೂ ಮಲಗುವ ಮುನ್ನ ಹಲ್ಲುಜ್ಜಿ ಮಲಗಿ.

ಹಲ್ಲು ಉಜ್ಜುವ ಅವಧಿಗಿಂತ ಕ್ರಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ದಿನಕ್ಕೆ ನಾಲ್ಕು ಬಾರಿ ಹಲ್ಲುಜ್ಜುವುದರಿಂದ ಹಲ್ಲು ಹಾಳಾಗಬಹುದು. (ಸವೆದು ಹೋಗಬಹುದು) ದಿನಕ್ಕೆರಡು ಬಾರಿ ಸರಿಯಾದ ಉದ್ದೇಶದಿಂದ ಹಲ್ಲು ತಿಕ್ಕಬೇಕು. ಸಾಮಾನ್ಯವಾಗಿ ಬ್ರಶ್‌ಗೆ ಮೇಲೆ ಕೆಳಗೆ ಚಾಲನೆ ನೀಡಬೇಕು. ಬಹಳ ಜೋರಾಗಿ ಅಡ್ಡ ಹಲ್ಲುಜ್ಜಬಾರದು. ಅತಿಯಾದ ಶಕ್ತಿ ಬಲ ಹಾಕಿ ಹಲ್ಲುಜ್ಜುವುದರಿಂದ ಹಲ್ಲಿಗೆ ಹಾನಿಯಾಗಬಹುದು.

ಬ್ರಶ್‌ಗಳನ್ನು ಆರಿಸುವಾಗ ಜಾಗ್ರತೆವಹಿಸಿ. ಕನಿಷ್ಠ ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸಿ. ಟಿ.ವಿ/ ದಿನ ಪತ್ರಿಕೆಗಳಲ್ಲಿ ಬರುವ ಜಾಹೀರಾತಿಗೆ ಮಾರು ಹೋಗಿ ಬ್ರಶ್ ಅಥವಾ ಟೂತ್‌ಪೇಸ್ಟ್ (ದಂತ ಚೂರ್ಣ) ಖರೀದಿಸಬೇಡಿ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ದಂತ ವೈದ್ಯರ ಸಲಹೆ ಪಡೆದು ಬ್ರಶ್ ಹಾಗೂ ದಂತಚೂರ್ಣ ಖರೀದಿಸಿ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ದಂತ ವೈದರ ಸಲಹೆ ಪಡೆದು ಬ್ರಶ್ ಹಾಗೂ ದಂತ ಚೂರ್ಣದ ಆಯ್ಕೆ ಹಲ್ಲುಜ್ಜುವ ವಿಧಾನ, ಬ್ರಶ್‌ನ ಆಯ್ಕೆ ಇತ್ಯಾದಿಗಳ ಬಗ್ಗೆ ದಂತ ವೈದ್ಯರ ಸಲಹೆ ಕೇಳುವುದು ಸೂಕ್ತ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುವ ದಂತ ಚೂರ್ಣಗಳು ಫ್ಲೋರೈಡ್‌ನಿಂದ ಕೂಡಿದ್ದು ಹುಳುಕಾಗದಂತೆ ಹಲ್ಲನ್ನು ಕಾಪಾಡುತ್ತದೆ.
ಪದೇ ಪದೇ ಬ್ರಶ್ ಹಾಗೂ ಪೇಸ್ಟ್ ಬದಲಾಯಿಸಬೇಡಿ. ಇದರಿಂದ ಬಾಯಿಯಲ್ಲಿ ಹುಣ್ಣು, ಅಲರ್ಜಿ, ತುರಿಕೆ ಬರಬಹುದು. ಬ್ರಾಂಡ್ ಅಥವಾ ಕಂಪೆನಿ ಬದಲಾಯಿಸುವಾಗ ದಂತ ವೈದ್ಯರ ಸಲಹೆ ಪಡೆಯಿರಿ. ಹಲ್ಲು ಬೆಳ್ಳಗಾಗಿಸುವ ಯಾವುದೇ ರಾಸಾಯನಿಕಗಳನ್ನು ದಯವಿಟ್ಟು ದಂತ ವೈದ್ಯರ ಸಲಹೆ ಇಲ್ಲದೆ ಉಪಯೋಗಿಸಬೇಡಿ.

ನಿಮ್ಮ ವಸಡುಗಳನ್ನು ಬ್ರಶ್ ಆದ ಬಳಿಕ ಬೆರಳಿನಿಂದ ಗಟ್ಟಿಯಾಗಿ ತಿಕ್ಕಿ ಕನಿಷ್ಠ ಪಕ್ಷ 2 ರಿಂದ ಮೂರು ನಿಮಿಷ ವಸಡನ್ನು ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುವುದು ಮತ್ತು ವಸಡಿನ ಆರೋಗ್ಯವನ್ನು ವೃದ್ಧಿಸುತ್ತವೆ. ಊಟದ ಮಧ್ಯೆ ಸಿಹಿ ಪದಾರ್ಥ ಅಂಟಾದ ಪದಾರ್ಥ (ಚಾಕೊಲೇಟ್) ಇತ್ಯಾದಿಗಳನ್ನು ಸೇವಿಸಬೇಡಿ. ಅನಿವಾರ್ಯವಾದಲ್ಲಿ ತಿಂದ ಬಳಿಕ ಚೆನ್ನಾಗಿ ಹಲ್ಲು ಉಜ್ಜಬೇಕು. ಬಾಯಿಯನ್ನು ಪ್ರತಿ ಸಲ ಆಹಾರ ತಿಂದ ಬಳಿಕ ನೀರಿನಿಂದ ಚೆನ್ನಾಗಿ ತೊಳೆಯಿರಿ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚನೆಯ ನೀರಿಗೆ ಉಪ್ಪು ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸುವುದು ಸೂಕ್ತ.

ವಿಟಮಿನ್ ಮತ್ತು ಖನಿಜಾಂಶಗಳುಳ್ಳ ಸತ್ವಯುಕ್ತ ಆಹಾರವನ್ನು ಸೇವಿಸಿರಿ. ಕಬ್ಬು, ಆಪಲ್, ಕ್ಯಾರೆಟ್, ಮೂಲಂಗಿ ಇತ್ಯಾದಿ ನಾರುಯುಕ್ತ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿದರೆ ಹಲ್ಲುಗಳು ಸದೃಢವಾಗುತ್ತದೆ. ಸೌತೆಕಾಯಿ, ಟೊಮೆಟೊ ಇತ್ಯಾದಿ ಹಸಿ ತರಕಾರಿಗಳನ್ನು ಜಾಸ್ತಿ ಉಪಯೋಗಿಸಿದ್ದಲ್ಲಿ ಹಲ್ಲಿನ ಆರೋಗ್ಯ ಜೊತೆ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.
ನಿಮ್ಮ ದಂತ ವೈದ್ಯರನ್ನು ನಿಯಮಿತವಾಗಿ 6 ತಿಂಗಳಿಗೊಮ್ಮೆಯಾದರೂ ಭೇಟಿ ಮಾಡಿ. ಇದು ನಿಮ್ಮ ತೊಂದರೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲು ಹಾಗೂ ಗುಣಪಡಿಸಲು ಸಹಕಾರಿ. ಈ ಹತ್ತು ಸೂತ್ರಗಳನ್ನು ಸರಿಯಾಗಿ ಅನುಸರಿಸಿದಲ್ಲಿ ನಿಮ್ಮ ಹಲ್ಲು ನಿಮ್ಮ ನಗು ಆಸ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಆರೋಗ್ಯವಂತ ಹಲ್ಲುಗಳು, ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲು ಸುದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅತೀ ಅವಶ್ಯಕ. ನಾವು ನಮ್ಮ ಬಾಯಿಯ ಸ್ವಚ್ಛತೆ, ಹಲ್ಲುಗಳ ಭದ್ರತೆ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡದಿದ್ದಲ್ಲಿ ಹತ್ತು ಹಲವಾರು ರೋಗಗಳಿಗೆ ರಹದಾರಿಯಾಗಬಲ್ಲುದು. ನಾವು ತಿನ್ನುವ ಆಹಾರದ ಪಚನಕ್ಕೆ ಮತ್ತು ಜೀರ್ಣ ಕ್ರಿಯೆಗಳಿಗೆ ಆರೋಗ್ಯ ಪೂರ್ಣ ಹಲ್ಲುಗಳು ಅತೀ ಅವಶ್ಯಕ. ಇಲ್ಲವಾದಲ್ಲಿ ಒಂದಕ್ಕೊಂದು ಸಮಸ್ಯೆಗಳು ಕೂಡಿಕೊಂಡು ವ್ಯಕ್ತಿಯು ರೋಗರುಜಿನಗಳ ಹಂದರವಾಗಬಹುದು. ಅಪೂರ್ಣ ಜೀರ್ಣ ಕ್ರಿಯೆಯಿಂದ ರಕ್ತಹೀನತೆ ಬರಬಹುದು. ರಕ್ತಹೀನತೆಯಿಂದ ಇನ್ಯಾವುದೋ ರೋಗಕ್ಕೆ ಮೂಲವಾಗಬಹುದು. ಅದೇ ರೀತಿ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವಸಡು ರೋಗಗಳು ಹುಟ್ಟಿಕೊಳ್ಳಬಹುದು.

- Advertisement -

Related news

error: Content is protected !!